ಬಾಡಿ ಕ್ಯಾಮೆರಾ ಧರಿಸಿದ್ದ ಭಯೋತ್ಪಾದಕರು; ರೇಖಾಚಿತ್ರ ಬಿಡುಗಡೆಗೊಳಿಸಿದ ಭದ್ರತಾ ಪಡೆ
ಶ್ರೀನಗರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಮತ್ತೆ ನಮ್ಮ ಗುಪ್ತಚರ ವಿಭಾಗ ವಿಫಲವಾಯಿತೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ದಾಳೀಗೆ ಉಗ್ರರು ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪಾಕಿಸ್ಥಾನಿ ಮತ್ತು ಸ್ಥಳೀಯ ಕಾಶ್ಮೀರಿ ಭಯೋತ್ಪಾದಕರು ಸೇರಿ ಈ ಕೃತ್ಯ ಎಸಗಿದ್ದಾರೆ. 6-8 ಮಂದಿ ಉಗ್ರರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ದಾಳಿ ನಡೆಸುವ ಮೊದಲು ಸಂಪೂರ್ಣ ಈ ಜಾಗದ ಬಗ್ಗೆ ತಿಳಿದಿದ್ದರು. ಭಾರಿ ಪ್ರಮಾಣದಲ್ಲಿ ಸಾವುನೋವು ಸಂಘಟಿಸಲು ಉಗ್ರರು ಪ್ಲ್ಯಾನ್ ಮಾಡಿದ್ದರು ಎಂಬುದು ತಿಳಿದುಬಂದಿದೆ.
ಬೈಸರನ್ ಯಾಕೆ?
ಪಹಲ್ಗಾಮ್‌ನಿಂದ ಸರಿಸುಮಾರು 6.5 ಕಿಲೋಮೀಟರ್ ದೂರದಲ್ಲಿ ಬೈಸರನ್ ಇದೆ. ಈ ಜಾಗಕ್ಕೆ ವಾಹನ ಸಂಚಾರ ಇಲ್ಲ. ಕಾಲ್ನಡಿಗೆ ಅಥವಾ ಕುದುರೆ ಸವಾರಿಯ ಮೂಲಕ ಮಾತ್ರ ಈ ಜಾಗಕ್ಕೆ ಹೋಗಲು ಸಾಧ್ಯವಾಗುತ್ತದೆ. ದಟ್ಟವಾದ ಕಾಡುಗಳಿಂದ ಆವೃತವಾದ ಸುಂದರವಾದ ಹುಲ್ಲುಗಾವಲು ಬೈಸರನ್‌ನಲ್ಲಿ ಸಾಧಾರಣವಾಗಿ 1,000ರಿಂದ 1,500 ಪ್ರವಾಸಿಗರು ಇರುತ್ತಾರೆ. ಆದರೆ ಮಂಗಳವಾರ ಮಧ್ಯಾಹ್ನ ಈ ಸಂಖ್ಯೆ ಸ್ವಲ್ಪ ಕಡಿಮೆ ಇದ್ದ ಕಾರಣ ಸಾವಿನ ಸಂಖ್ಯೆ ಕಡಿಮೆಯಾಗಿದೆ.
ವಾಹನ ಸಂಚರಿಸಲು ರಸ್ತೆ ಇಲ್ಲದ ಕಾರಣ ಕೂಡಲೇ ಸ್ಥಳಕ್ಕೆ ರಕ್ಷಣಾ ಪಡೆಗಳು ಆಗಮಿಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೇ ಗಂಭೀರವಾಗಿ ಗಾಯಗೊಂಡವರನ್ನು ಈ ಸ್ಥಳದಿಂದ ಸಾಗಿಸಲು ಸಾಧ್ಯವಿಲ್ಲದ ಕಾರಣ ಸಾವುನೋವು ಹೆಚ್ಚಾಗಬಹುದು ಎಂಬುದನ್ನು ಮೊದಲೇ ತಿಳಿದುಕೊಂಡಿದ್ದ ಉಗ್ರರು ನಿಖರವಾಗಿ ಯೋಜಿಸಿ ಕೃತ್ಯ ನಡೆಸಿದ್ದಾರೆ.
ದಾಳಿಗೆ ಮುನ್ನ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಅಡಗುತಾಣಗಳನ್ನು ನಿರ್ಮಿಸಿದ್ದರು. ಬಾಡಿ ಕ್ಯಾಮೆರಾಗಳನ್ನು ಧರಿಸಿದ್ದರು. ವಿಶೇಷವಾಗಿ ಹೆಲ್ಮೆಟ್ ಅಳವಡಿಸಿದ ಕ್ಯಾಮೆರಾಗಳನ್ನು ಧರಿಸಿ ಕೃತ್ಯವನ್ನು ಸಂಪೂರ್ಣವಾಗಿ ಚಿತ್ರೀಕರಿಸಿದ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ.
ಮೂವರು ಭಯೋತ್ಪಾದಕರು ಪ್ರವಾಸಿಗರನ್ನು ಒಟ್ಟುಗೂಡಿಸಿ ಪುರುಷ ಮತ್ತು ಮಹಿಳಾ ಗುಂಪುಗಳಾಗಿ ವಿಂಗಡಿಸಿದ್ದಾರೆ. ನಂತರ ಅವರ ಧರ್ಮ, ಹೆಸರನ್ನು ಕೇಳಿದ್ದಾರೆ. ಈ ವೇಳೆ ಹಿಂದೂ ಹೆಸರು ಹೇಳಿದವರ ಮೇಲೆ ಶೂಟ್ ಮಾಡಿದ್ದಾರೆ. ಸೇನಾ ಸಮವಸ್ತ್ರದಲ್ಲಿ ಬಂದ ಉಗ್ರರನ್ನು ನೋಡಿ ಪ್ರವಾಸಿಗರು ಇವರು ಸೈನಿಕರು ಎಂದೇ ಭಾವಿಸಿದ್ದರು. ಸುಮಾರು 20 ನಿಮಿಷ ಸ್ಥಳದಲ್ಲಿ ಇದ್ದ ಉಗ್ರರು ಸಾಲು ನಿಲ್ಲಿಸಿ ಹತ್ಯೆ ಮಾಡಿದ್ದರು. ಈ ವೇಳೆ ಕೆಲವರು ಓಡಿ ಹೋಗಲು ಯತ್ನಿಸಿದಾಗ ಅವರ ಮೇಲೂ ಶೂಟ್ ಮಾಡಿದ್ದಾರೆ.
ದಾಳಿಯಿಂದ ಪಾರಾಗಲು ಪ್ರವಾಸಿಗರು ಡೇರೆಗಳಲ್ಲಿ ಅಡಗಿ ಕುಳಿತಿದ್ದರು. ಈ ಡೇರೆಗೆ ಬಂದ ಉಗ್ರರು ಪುರುಷರನ್ನು ಕರೆದು ನಿನ್ನ ಧರ್ಮ ಯಾವುದು? ಕಲಿಮಾ ಹೇಳು ಎಂದು ಹೇಳಿದ್ದರು. ಕಲಿಮಾ ಹೇಳದ್ದಕ್ಕೆ ಅಲ್ಲೇ ಪ್ರವಾಸಿಯ ತಲೆಗೆ ಗುಂಡಿಕ್ಕಿದ್ದಾರೆ.