2019ರ ಪುಲ್ವಾಮಾ ಬಳಿಕ ಅತಿದೊಡ್ಡ ದಾಳಿ – ಧರ್ಮ ಕೇಳಿ ಪ್ರವಾಸಿಗರಿಗೆ ಗುಂಡಿಕ್ಕಿದ ಉಗ್ರರು
ಹೊಸದಿಲ್ಲಿ : ಜಮ್ಮು ಮತ್ತು ಕಾಶ್ಮೀರದ ಪ್ರವಾಸಿಗರ ಸ್ವರ್ಗ ಎಂದು ಕರೆಯಲ್ಪಡುವ ಪಹಲ್ಗಾಮ್ ಕಣಿವೆ ನಿನ್ನೆ ಅಕ್ಷರಶಃ ನರಕವಾಗಿ ಬದಲಾಗಿದೆ. ಪ್ರವಾಸಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಇಬ್ಬರು ಕನ್ನಡಿಗರ ಸಹಿತ ಕನಿಷ್ಠ 26 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವು ಮಂದಿ ಚಿಂತಾಜನಕ ಸ್ಥಿತಿಯಲ್ಲಿ ಇದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಸೌದಿ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಮೊಟಕುಗೊಳಿಸಿ ವಾಪಸಾಗಿದ್ದು, ಇಂದು ನಡೆಯುವ ಮಹತ್ವದ ಕ್ಯಾಬಿನೆಟ್ ಸಭೆಯಲ್ಲಿ ಭಾಗವಹಿಸಿ ಖಡಕ್ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಈ ನಡುವೆ ಅಮಾಯಕ ಪ್ರವಾಸಿಗರ ಮೇಳೆ ನಡೆದ ಹೇಯ ದಾಳೀಗೆ ಜಾಗತಿಕವಾಗಿ ಆಕ್ರೋಶ ವ್ಯಕ್ತವಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಹಿತ ಹಲವು ನಾಯಕರು ಕೃತ್ಯವನ್ನು ಖಂಡಿಸಿ ನೆರವಿನ ಭರವಸೆ ನೀಡಿದ್ದಾರೆ.
2019ರ ಪುಲ್ವಾಮಾ ದಾಳಿ ಬಳಿಕ ಅತಿದೊಡ್ಡ ದಾಳಿಯಾಗಿದೆ. ಇದು ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಎಂದು ಅಧಿಕಾರಿಗಳು ಹೇಳಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿಯೇ ತಮ್ಮ ಸೌದಿ ಅರೇಬಿಯಾ ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ಮರಳಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ದೇಶದ್ಯಾಂತ ಆಕ್ರೋಶ
ದಾಳಿ ನಡೆದ ವಿಷಯ ತಿಳಿಯುತ್ತಿದ್ದಂತೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಭಯೋತ್ಪಾದಕರಿಗೆ ಬುದ್ಧಿ ಕಲಿಸಬೇಕು ಎಂಬ ಆಗ್ರಹ ವ್ಯಕ್ತವಾಗತೊಡಗಿದೆ.
ಮನಕಲಕಿದ ಚಿತ್ರ
ಹನಿಮೂನ್‌ಗೆ ಹೋಗಿದ್ದ ನವವಿವಾಹಿತ ದಂಪತಿಯ ಪೈಕಿ ಗಂಡನನ್ನು ಉಗ್ರರು ಕೊಂದಿದ್ದು, ಗಂಡನ ಶವದ ಪಕ್ಕ ಕುಳಿತು ಪತ್ನಿ ರೋದಿಸುತ್ತಿರುವ ಫೋಟೊ ಮನಕಲಕುತ್ತಿದೆ. ಕೋಟಿಗಟ್ಟಲೆ ಜನ ಈ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಈ ದೃಶ್ಯ ಜೀವಮಾನವಿಡೀ ಮರೆತುಹೋಗದು ಎಂದು ಬರೆದುಕೊಂಡಿದ್ದಾರೆ. ಇದು ವಾರದ ಹಿಂದೆಯಷ್ಟೇ ಮದುವೆಯಾಗಿದ್ದ ಭಾರತೀಯ ನೌಕಾಪಡೆಯ ಅಧಿಕಾರಿ ಎನ್ನಲಾಗಿದೆ.
ಲೆಫ್ಟಿನೆಂಟ್ ವಿನಯ್ ನರ್ವಾಲ್ (26) ದಾಳಿಯಲ್ಲಿ ಮೃತಪಟ್ಟ ಅಧಿಕಾರಿ. ಹರಿಯಾಣ ಮೂಲದ ನರ್ವಾಲ್ ಕಳೆದ ಏಪ್ರಿಲ್ 16ರಂದು ಮದುವೆಯಾಗಿದ್ದರು. ಕೊಚ್ಚಿಯಲ್ಲಿ ಹೊಸದಾಗಿ ನೇಮಕಗೊಂಡಿದ್ದ ನೌಕಾಪಡೆಯ ನರ್ವಾಲ್ ರಜೆಯ ಮೇಲೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದಲ್ಲಿರುವಾಗಲೇ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.

ಗುಪ್ತಚರ ಇಲಾಖೆ ಅಧಿಕಾರಿ ಸಾವು
ಅಲ್ಲದೇ ಉಗ್ರರ ದಾಳಿಗೆ ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಬಿಹಾರ ಮೂಲದ ರಂಜನ್ ಅವರು ಪತ್ನಿ, ಮಗುವಿನ ಕಣ್ಣಮುಂದೆಯೇ ಗುಂಡಿಗೆ ಬಲಿಯಾಗಿದ್ದಾರೆ. ಬಿಹಾರ ಮೂಲದ ಮನೀಶ್ ರಂಜನ್ ತೆಲಂಗಾಣ ಗುಪ್ತಚರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕುಟುಂಬದೊಂದಿಗೆ ಸಂತಸದಿಂದ ಕಾಲ ಕಳೆಯುವಾಗಲೇ ರಕ್ಕಸರ ದಾಳಿಗೆ ಬಲಿಯಾಗಿದ್ದಾರೆ. ಅವರ ಪತ್ನಿ ಮತ್ತು ಮಗು ಸುರಕ್ಷಿತವಾಗಿದ್ದಾರೆ.
ಶಿವಮೊಗ್ಗದ ಉದ್ಯಮಿಯ ಹೆಂಡತಿಯ ಕಣ್ಣೀರು
ಕಾಶ್ಮೀರಕ್ಕೆ ಹೋಗುವುದು ನನ್ನ ಗಂಡನ ಕನಸಾಗಿತ್ತು. ಈಗ ಯಾಕಾದ್ರೂ ಬಂದಿದ್ದೇವೋ ಏನೋ ಈ ಕರ್ಮಕ್ಕೆ ಎಂದು ಉಗ್ರರ ದಾಳಿಯಲ್ಲಿ ಸಾವಿಗೀಡಾದ ಶಿವಮೊಗ್ಗ ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯ ಪತ್ನಿ ಪಲ್ಲವಿ ಕಣ್ಣೀರಿಟ್ಟಿದ್ದಾರೆ.
ನಾವು 500 ಜನ ಇದ್ವಿ. ಮಿನಿ ಸ್ವಿಡ್ಜರ್‌ಲ್ಯಾಂಡ್ ಅಂತಾ ಒಂದು ಪಾಯಿಂಟ್ ಅದು. ಆಗಷ್ಟೇ ಹೋಗಿ ಕುದುರೆ ಇಳಿದಿದ್ವಿ. ನನ್ನ ಮಗ ಬೆಳಗ್ಗೆಯಿಂದ ಏನೂ ತಿಂದಿರಲಿಲ್ಲ. ಅಲ್ಲೇನಾದ್ರೂ ತಗೊಳೋಕೆ ಅಂತಾ ನಮ್ಮ ಮನೆಯವರು, ಅಂಗಡಿಯವರ ಬಳಿ ವಿಚಾರಿಸಲು ಹೋದರು. ನನ್ನ ಮಗನ ಕರೆಯಲು ನಾನು ಹೋದೆ. ಗುಂಡಿನ ತರ ಸೌಂಡ್ ಬಂತು. ನಾವೆಲ್ಲಾ ಆರ್ಮಿಯವರು ಇರಬೇಕು ಅಂನ್ಕೊಂಡ್ವಿ. ನಾನು ಈ ಕಡೆ ತಿರುಗಿ ನೋಡೋ ಅಷ್ಟರಲ್ಲಿ ಬೇರೆಯವರೆಲ್ಲಾ ಓಡುತ್ತಿದ್ದರು. ನನ್ನ ಮಗನ ಕರೆದುಕೊಳ್ಳೋಕೆ ಅಂತಾ ನೋಡ್ತಿನಿ, ಅಷ್ಟರಲ್ಲಿ ನಮ್ಮ ಮನೆಯವರು ರಕ್ತದ ಮಡುವಿನಲ್ಲಿ ಇದ್ದರು. ಅವರು ತಲೆಗೆ ಹೊಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಮೂವರು ಮುಸ್ಲಿಮರು ಬಿಸ್ಮಿಲ್ಲಾ, ಬಿಸ್ಮಿಲ್ಲಾ ಅಂತಿದ್ರು. ನಾನು ಅಲ್ಲೇ ಇದ್ದ ಭಯೋತ್ಪಾದಕನ ಬಳಿ ನನ್ನ ಪತಿಯನ್ನು ಸಾಯಿಸಿದ್ದೀರಾ, ನನ್ನನ್ನು ಸಾಯಿಸಿ ಎಂದು ನಾನು ಕೇಳಿದೆ. ನನ್ನ ಮಗ ಏ ನಾಯಿ… ನನ್ನ ತಂದೆಯನ್ನು ಕೊಂದೆಯಲ್ಲಾ, ನಮ್ಮನ್ನು ಕೊಂದುಬಿಡು ಎಂದ.. ಇಲ್ಲ ನಿಮ್ಮನ್ನು ಸಾಯಿಸಲ್ಲ. ಮೋದಿಗೆ ಹೋಗಿ ಹೇಳು ಎಂದು ಹೋದ. ನಮ್ಮ ಎದುರಿಗೆ ಓಡಾಡುತ್ತಿದ್ದರು. ಯಾರೂ ಇರಲಿಲ್ಲ.. ಸೈನಿಕರೂ ಯಾರೂ ಇರಲಿಲ್ಲ. ಮಾಮೂಲಿ ಬಟ್ಟೆಯಲ್ಲಿ ಇದ್ದರು. ನವ ದಂಪತಿ ಒಬ್ಬರು ಬಂದಿದ್ದರು. ಗಂಡಸರಿಗೆ ಮಾತ್ರ ಹೊಡೆದರು. ಹೆಂಗಸರು, ಮಕ್ಕಳಿಗೆ ಏನೂ ಆಗಿಲ್ಲ ಎಂದು ವಿವರಿಸಿದ್ದಾರೆ.