ಬೃಹತ್ ಸಮಾವೇಶಕ್ಕೆ ಜನ ಸೇರದೆ ಕಾಂಗ್ರೆಸ್‌ಗೆ ಮುಜುಗರ
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ ಬಿಹಾರದ ಬಕ್ಸರ್‌ನಲ್ಲಿ ಭಾನುವಾರ ಜರುಗಿದ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ವಿಫಲವಾಗಿರುವುದರಿಂದ ಆಕ್ರೋಶಗೊಂಡಿರುವ ಹೈಕಮಾಂಡ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನೇ ಅಮಾನತುಗೊಳಿಸಿದೆ. ರಾಜಕೀಯ ಕಾರ್ಯಕ್ರಮದಲ್ಲಿ ಸಭಿಕರ ಸಂಖ್ಯೆ ತೀರಾ ವಿರಳವಾಗಿತ್ತು. ಖರ್ಗೆ ಖಾಲಿ ಕುರ್ಚಿಗಳನ್ನು ನೋಡಿಕೊಂಡು ಭಾಷಣ ಮಾಡಬೇಕಾಯಿತು. ಇದರಿಂದ ಕಾಂಗ್ರೆಸ್ ಹೈಕಮಾಂಡ್ ತೀವ್ರ ಮುಜುಗರಕ್ಕೊಳಗಾಗಿದೆ. ಹೀಗಾಗಿ ಬಕ್ಸರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮನೋಜ್ ಕುಮಾರ್ ಪಾಂಡೆಯನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ಮನೋಜ್ ಕುಮಾರ್ ಪಾಂಡೆ ಅವರನ್ನು ಅನಿರ್ದಿಷ್ಟಾವಧಿಗೆ ಅಮಾನತು ಮಾಡಲಾಗಿದೆ ಮತ್ತು ಪಕ್ಷದ ಎಲ್ಲ ಹುದ್ದೆಗಳಿಂದ ತೆಗೆದುಹಾಕಲಾಗಿದೆ ಎಂದು ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿಯ (ಬಿಪಿಸಿಸಿ) ಮಾಧ್ಯಮ ಕೋಶದ ಅಧ್ಯಕ್ಷ ರಾಜೇಶ್ ರಾಥೋಡ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಮಾನತಿಗೆ ನಿರ್ದಿಷ್ಟ ಕಾರಣ ಸೂಚಿಸದಿದ್ದರೂ ರಾಷ್ಟ್ರೀಯ ಅಧ್ಯಕ್ಷರು ಭಾಗವಹಿಸಿದ ಸಮಾವೇಶ ಖಾಲಿ ಹೊಡೆದಿರುವುದೇ ಕಾರಣ ಎನ್ನಲಾಗಿದೆ.
ಭಾನುವಾರ ಬಕ್ಸಾರ್‌ನ ದಲ್ಸಾಗರ್ ಕ್ರೀಡಾಂಗಣದಲ್ಲಿ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್’ ಕಾರ್ಯಕ್ರಮ ಆಯೋಜನೆಯಾಗಿತ್ತು. ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ಖರ್ಗೆ ಬರುವ ವಿಚಾರ ತಿಳಿದಿದ್ದರೂ ಬಹಳಷ್ಟು ಕುರ್ಚಿಗಳು ಖಾಲಿ ಇದ್ದವು. ಬಕ್ಸರ್‌ನ ಕಾಂಗ್ರೆಸ್ ಶಾಸಕ ಸಂಜಯ್ ಕುಮಾರ್ ತಿವಾರಿ ಮುಂದೆ ಬಂದು ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಜನರಲ್ಲಿ ಕೇಳಿಕೊಳ್ಳುತ್ತಿದ್ದರು. ಖಾಲಿ ಕುರ್ಚಿಗಳು ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಕಾಂಗ್ರೆಸ್ ತೀವ್ರ ಮುಜುಗರ ಅನುಭವಿಸಿದೆ.
ಕಡಿಮೆ ಸಂಖ್ಯೆಯಲ್ಲಿ ಜನರ ಭಾಗಿ ಮತ್ತು ಖಾಲಿ ಕುರ್ಚಿಗಳು ಹಿರಿಯ ನಾಯಕರಿಗೆ ಮುಜುಗರವನ್ನು ಉಂಟು ಮಾಡಿತ್ತು. ಈ ಕಾರಣಕ್ಕೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಈ ವರ್ಷಾಂತ್ಯದಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿ ಮಾಡಿಕೊಂಡಿದ್ದರೆ ಬಿಜೆಪಿ, ಜೆಡಿಯು, ಎಲ್‌ಜೆಪಿ ಮೈತ್ರಿ ಮಾಡಿಕೊಂಡಿವೆ. ಈಗಲೇ ಬಿಹಾರದಲ್ಲಿ ಚುನಾವಣೆಯ ಕಾವು ಜೋರಾಗಿದೆ.