ಪುತ್ತೂರಿನಲ್ಲಿ ತಾಲೂಕು ಹಿಂದೂ ಧರ್ಮ ಶಿಕ್ಷಣ ಸಮಿತಿ ಉದ್ಘಾಟನೆ

ಶೃಂಗೇರಿ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾ ಸನ್ನಿಧಾನಂಗಳವರ ಆಶೀರ್ವಾದಗಳೊಂದಿಗೆ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ನೀಡಿರುವ ನಿರ್ದೇಶನದಂತೆ ಪುತ್ತೂರಿನಾದ್ಯಂತ ಧರ್ಮ ಶಿಕ್ಷಣವನ್ನು ಜಾರಿಗೊಳಿಸುವ ಹಿನ್ನೆಲೆಯಲ್ಲಿ ತಾಲೂಕು ಧರ್ಮ ಶಿಕ್ಷಣ ಸಮಿತಿಯನ್ನು ಭಾನುವಾರ ಪುತ್ತೂರಿನ ಸ್ವಾಮಿ ಕಲಾಮಂದಿರದಲ್ಲಿ ಘೋಷಿಸಲಾಯಿತು.  

ಕಳೆದ ಕೆಲವು ತಿಂಗಳುಗಳಿಂದ ಪುತ್ತೂರು ಹಾಗು ಕಡಬ ತಾಲೂಕಿನ ನಾನಾ ಭಾಗಗಳಲ್ಲಿ ಗ್ರಾಮ ಸಮಿತಿಗಳು ರೂಪುಗೊಂಡಿದ್ದು, ಇದೀಗ ತಾಲೂಕು ಸಮಿತಿಯನ್ನು ರಚಿಸುವ ಮೂಲಕ ಧರ್ಮ ಶಿಕ್ಷಣದ ಜಾರಿಗೊಳಿಸುವಿಕೆಯ ಪ್ರಕ್ರಿಯನ್ನು ಮತ್ತೊಂದು ಹಂತಕ್ಕೆ ಒಯ್ಯಲಾಯಿತು.

ಸಮಿತಿಯ ಗೌರವ ಅಧ್ಯಕ್ಷರಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಅಧ್ಯಕ್ಷರಾಗಿ ದಂಬೆಕಾನ ಸದಾಶಿವ ರೈ, ಸಂಚಾಲಕರಾಗಿ ಸುಬ್ರಹ್ಮಣ್ಯ ನಟ್ಟೋಜ, ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಬೋರ್ಕರ್, ಸಂಯೋಜಕರಾಗಿ ಹೇಮನಾಥ ಶೆಟ್ಟಿ ಕಾವು, ಕಾರ್ಯದರ್ಶಿಯಾಗಿ ಶೈಲೇಶ್ ಜಿ ರಾವ್, ಸುರೇಶ್ ಕೆಮ್ಮಿಂಜೆ, ಜತೆ ಕಾರ್ಯದರ್ಶಿಯಾಗಿ ವಿಶ್ವೇಶ್ವರ ಭಟ್ ಬಂಗಾರಡ್ಕ, ಖಜಾಂಜಿಯಾಗಿ ಎ. ಮಾಧವ ಸ್ವಾಮಿ, ಉಪಾಧ್ಯಕ್ಷರಾಗಿ ಸಂಜೀವ ಮಠಂದೂರು, ಚಿದಾನಂದ ಬೈಲಾಡಿ, ಕೂರೇಲು ಸಂಜೀವ ಪೂಜಾರಿ, ಡಾ. ಕೃಷ್ಣ ಪ್ರಸನ್ನ, ಇಂದು ಶೇಖರ್, ಕೃಷ್ಣಪ್ರಸಾದ್ ಬೆಟ್ಟ, ಎವಿಕೆ ನಾರಾಯಣ,  ಮಂಜುನಾಥ ನಾಯ್ಕ, ನಾಗೇಶ್ ಭಟ್, ಆರ್.ಸಿ.ನಾರಾಯಣ, ಅಣ್ಣಪ್ಪ, ಮೋಹನ್ ನೆಲ್ಲಿಗುಂಡಿ, ಅವಿನಾಶ್ ಕೊಡಿಂಕಿರಿ, ದೀಕ್ಷಿತ್ ಹೆಗ್ಡೆ, ರಂಜಿತ್ ಬಂಗೇರ, ಪಿ.ಜಿ ಜಗನ್ನಿವಾಸ ರಾವ್, ಬೂಡಿಯಾರ್ ರಾಧಾಕೃಷ್ಣ ರೈ, ಭಾಸ್ಕರ ಆಚಾರ್ಯ ಹಿಂದಾರ್, ನವೀನ್ ಕುಲಾಲ್, ಸತೀಶ್ ರಾವ್, ಶಶಾಂಕ ಕೊಟೇಚಾ, ಸಾಜ ರಾಧಾಕೃಷ್ಣ ಆಳ್ವ ಅವರನ್ನು ಆಯ್ಕೆ ಮಾಡಲಾಯಿತು.





























 
 

ಸಮಿತಿಯ ಗೌರವ ಸಲಹೆಗಾರರಾಗಿ ಮುಗೆರೋಡಿ ಬಾಲಕೃಷ್ಣ ರೈ, ಕೇಶವ ಪ್ರಸಾದ್ ಮುಳಿಯ, ಎನ್ ಕೆ ಜಗನ್ನಿವಾಸ ರಾವ್, ಬಲರಾಮ ಆಚಾರ್ಯ, ಪಂಜಿಗುಡ್ಡೆ ಈಶ್ವರ ಭಟ್, ಡಾ ಸುರೇಶ್ ಪುತ್ತೂರಾಯ, ಜಯಸೂರ್ಯ ರೈ, ಯು.ಪಿ ಶಿವಾನಂದ ಅವರನ್ನು ನೇಮಿಸಲಾಯಿತು, ಶೈಕ್ಷಣಿಕ ಸಲಹೆಗಾರರಾಗಿ ಡಾ. ಶ್ರೀಶ ಕುಮಾರ್, ಪ್ರೊ. ವತ್ಸಲಾ ರಾಜ್ಞಿ, ಡಾ.ವರದರಾಜ ಚಂದ್ರಗಿರಿ, ಗಿರಿಶಂಕರ್ ಸುಲಾಯ, ಡಾ. ರಾಜೇಶ್ ಬೆಜ್ಜಂಗಳರವರನ್ನು ನಿಯುಕ್ತಿಗೊಳಿಸಲಾಯಿತು.

ಸಭಾ ಕಾರ್ಯಕ್ರಮ:

ಸಮಿತಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಹಿಂದೂ ವಿಚಾರಧಾರೆಗಳು ನಮ್ಮ ಮಕ್ಕಳಿಗೆ, ಸಮಾಜಕ್ಕೆ ಸಿಗುತ್ತಿಲ್ಲ, ನಾನು ಮೊದಲು ಹಿಂದೂ ಆ ಬಳಿಕ ಎಲ್ಲವೂ ಎಂಬ ಕಲ್ಪನೆ ನಮ್ಮಲ್ಲಿ ಬರಬೇಕಿದೆ. ಹಿಂದೂ ಧರ್ಮ ಶಿಕ್ಷಣವನ್ನು ಜಾರಿಗೊಳಿಸಲು ಹೊರಟಿರುವ ಈ ದಿನ ಚರಿತ್ರೆಯ ಪುಟಗಳಲ್ಲಿ ಬರೆದಿಡುವಂತಹ ದಿನ. ಮುಂದಿನ ತಲೆಮಾರು ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಲಿದೆ ಎಂದು ಹೇಳಿದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್ ಮಾತನಾಡಿ, ಧಾರ್ಮಿಕ ಶಿಕ್ಷಣ ಪಡೆಯುವ ನೀಡುವ ಮೂಲಕ ನಮ್ಮನ್ನು ನಾವು ಅರಿತುಕೊಳ್ಳಬೇಕು. ಮಾನವನ ಶರೀರ ಎಂಬುದು ಪುಣ್ಯ ಫಲದಿಂದ ಸಿಕ್ಕಿದ ಪ್ರಾಪ್ತಿ. ಮಾನವತ್ವದಿಂದ ಮಾಧವನ ಕಡೆಗೆ ಸಾಗುವುದೇ ಜೀವನದ ಸಾಧನೆ. ನಮ್ಮೆಲ್ಲಾ ಸಾಧನೆಗಳಿಗೂ ಶರೀರವೇ ಮೂಲಧಾತುವಾಗಿರುವುದರಿಂದ ಈ ಶರೀರಕ್ಕೆ ಧರ್ಮ ಶಿಕ್ಷಣದ ಮೂಲಕ ಸಂಸ್ಕಾರವನ್ನು ಒದಗಿಸುವ ಕೆಲಸ ಆಗಬೇಕು ಎಂದರು.

ಪ್ರಸ್ತಾವನೆಗೈದ ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಹಿಂದೂಗಳಿಗೆ ಧರ್ಮ ಶಿಕ್ಷಣ ದೊರೆಯುತ್ತಿಲ್ಲ ಎಂಬುದನ್ನು ಮನಗಂಡ ಶೃಂಗೇರಿ ಶ್ರೀಗಳು ಪ್ರತಿ ಗ್ರಾಮದಲ್ಲೂ ಧರ್ಮ ಶಿಕ್ಷಣ ನೀಡುವ ಯೋಚನೆ ಮಾಡಿದ್ದಾರೆ. ತಳಭಾಗದಿಂದಲೇ ನಮ್ಮ ಮಕ್ಕಳಿಗೆ ಧರ್ಮ ಶಿಕ್ಷಣ ದೊರೆತಾಗ ಸಂಸ್ಕಾರಭರಿತ ಸಮಾಜ ನಿರ್ಮಾಣ ಸಾಧ್ಯ ಎಂಬ ನೆಲೆಯಲ್ಲಿ ಈ ಮಾರ್ಗದರ್ಶನವನ್ನು ಗುರುಗಳು ನೀಡಿದ್ದಾರೆ. ಶಿಕ್ಷಣ ಸಂಸ್ಥೆಗಳು, ಭಜನಾ ಮಂದಿರ, ದೇವಸ್ಥಾನ, ದೈವಸ್ಥಾನಗಳಲ್ಲಿ ಧರ್ಮ ಶಿಕ್ಷಣಕ್ಕೆ ಮಹತ್ವ ನೀಡುವಂತಹ ಕೆಲಸಗಳು ಆಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಧರ್ಮ ಶಿಕ್ಷಣ ಸಮಿತಿಯ ಅಧ್ಯಕ್ಷ ದಂಬೆಕಾನ ಸದಾಶಿವ ರೈ ಮಾತನಾಡಿ, ಹಿಂದೂ ಧರ್ಮ ಶಿಕ್ಷಣದ ಬಗೆಗೆ ನಮಗೆ ಯಾರಿಗೂ ಅರಿವಿಲ್ಲ. ನಮಗೆ ತೋಚಿಂದಂತೆ ನಮ್ಮ ನಮ್ಮ ಆಚರಣೆಗಳನ್ನು ಮಾಡುತ್ತಿದ್ದೇವೆ. ನಮ್ಮ ಗ್ರಾಮಗಳಲ್ಲಿ ನಮ್ಮ ಮಕ್ಕಳಿಗೆ ಶಿಕ್ಷಣ ಬೇಕೆಂದು ಹೇಳುವ ಅನೇಕ ತಾಯಂದಿರು ಇದ್ದಾರೆ. ಹಾಗಾಗಿ ನಮಗೊಂದು ಜವಾಬ್ದಾರಿ ಇದೆ. ಹಿರಿಯರ ಪೀಳಿಗೆ ಧರ್ಮ ಶಿಕ್ಷಣದಿಂದ ವಂಚಿತರಾದರೂ ಮುಂದಿನ ಪೀಳಿಗೆಗೆ ಬಗೆಗೆ ತಿಳಿಸುವ ಅವಕಾಶ ಸಿಕ್ಕಿದೆ ಎಂದರು.

ವೇದಿಕೆಯಲ್ಲಿ ಸಮಿತಿಯ ಕಾರ್ಯದರ್ಶಿ ಶೈಲೇಶ್ ಜೆ. ರಾವ್, ತಾಲೂಕು ಮಹಿಳಾ ಪ್ರಮುಖ್ ಪ್ರಭಾವತಿ, ಖಜಾಂಜಿ ಮಾಧವ ಸ್ವಾಮಿ ಉಪಸ್ಥಿತರಿದ್ದರು. ಅನೇಕ ರಾಜಕೀಯ ಪ್ರಮುಖರು, ಧಾರ್ಮಿಕ ಮುಖಂಡರು, ಅಭ್ಯಾಗತರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಪ್ರಭಾವತಿ ಪ್ರಾರ್ಥಿಸಿ, ಬಾಲಕೃಷ್ಣ ಬೋರ್ಕರ್ ಸ್ವಾಗತಿಸಿದರು. ಸುಬ್ರಹ್ಮಣ್ಯ ನಟ್ಟೋಜ ವಂದಿಸಿ, ಸಾಮಾಜಿಕ ಕಾರ್ಯಕರ್ತ ದಿನೇಶ್ ಕುಮಾರ್ ಜೈನ್ ನಿರೂಪಿಸಿದರು.

ಕರ್ನಾಟಕದಲ್ಲಿಯೆ ಮೊತ್ತ ಮೊದಲ ಬಾರಿಗೆ ಎಂಬಂತೆ ಧರ್ಮ ಶಿಕ್ಷಣದ ಯೋಚನೆ ಪುತ್ತೂರಿನಲ್ಲಿ ಸಾಕಾರಗೊಳ್ಳುತ್ತಿದೆ. ಇದಕ್ಕೆ ಸಂಬಂಧಿಸಿದ ಸಿಲೆಬಸ್ ಶೃಂಗೇರಿಯಲ್ಲಿಯೇ ಸಿದ್ಧವಾಗುತ್ತಿದೆ. ಅದು 1ರಿಂದ 4ನೇ ತರಗತಿ, 5ರಿಂದ 8ನೇ ತರಗತಿ ಹಾಗೂ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಬೇರೇ ಬೇರೆ ಸಿಲೆಬಸ್ ತಯಾರಾಗುತ್ತಿದೆ. ಪ್ರತಿ ಗ್ರಾಮಗಳಲ್ಲೂ ಈ ಶಿಕ್ಷಣವನ್ನು ಬೋಧಿಸುವ ನೆಲೆಯಲ್ಲಿ ಗ್ರಾಮ ಸಮಿತಿಯನ್ನು ರೂಪಿಸಲಾಗಿದೆ. ಎಲ್ಲೆಡೆಗಳಲ್ಲ್ಲೂ ಉತ್ತಮ ಪ್ರೋತ್ಸಾಹ, ಸ್ಪಂದನೆ ದೊರೆತಿದೆ.

–       ಸುಬ್ರಹ್ಮಣ್ಯ ನಟ್ಟೋಜ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top