ವಿದ್ಯಾರ್ಥಿಗೆ ಧಾರ್ಮಿಕ ಅವಮಾನ ಮಾಡಿರುವ ಸಿಬ್ಬಂದಿಯ ನಡವಳಿಕೆ ಖಂಡನೀಯ : ಕಿಶೋರ್ ಕುಮಾರ್ ಪುತ್ತೂರು

ಮಂಗಳೂರು: ಕರ್ನಾಟಕ ಸಿಇಟಿ ಪರೀಕ್ಷೆಯ ಸಂದರ್ಭ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ ಧರಿಸಿದ್ದಕ್ಕೆ ಕೆಲ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಅವಮಾನಕರವಾಗಿ ವರ್ತಿಸಿರುವುದು ಅತ್ಯಂತ ಖೇದಕರ ಮತ್ತು ಶ್ರಮಪಟ್ಟು ಪರೀಕ್ಷೆಗೆ ಸಿದ್ಧವಾಗಿದ್ದ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಗೆ ತೀವ್ರ ಆಘಾತವನ್ನುಂಟುಮಾಡುವ ಘಟನೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಶೇಷವಾಗಿ, ನೀನು ಜನಿವಾರದಿಂದ ನೇಣು ಹಾಕಿಕೊಂಡರೆ ನಾವು ಏನು ಮಾಡಬೇಕು? ಎಂಬ ರೀತಿಯ ಉದ್ಧಟ, ಅಮಾನವೀಯ ಪ್ರಶ್ನೆಯನ್ನು ಕೇಳಿರುವ ಸಿಬ್ಬಂದಿಯ ನಡವಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ರೀತಿಯ ಪದಗಳು ಯಾವುದೇ ಪ್ರಜಾಪ್ರಭುತ್ವದಲ್ಲಿ, ಶೈಕ್ಷಣಿಕ ಪರಿಸರದಲ್ಲಿ, ಅಥವಾ ಮಾನವೀಯ ಸಮಾಜದಲ್ಲಿಯೂ ಸಹಿತ ಸಹಿಸಲ್ಪಡಲು ಸಾಧ್ಯವಿಲ್ಲ.

ಇದು ವಿದ್ಯಾರ್ಥಿಯ ಧಾರ್ಮಿಕ ನಂಬಿಕೆಯನ್ನು ಮಾತ್ರವಲ್ಲ, ಆತನ ಆತ್ಮಗೌರವ, ವ್ಯಕ್ತಿತ್ವ ಮತ್ತು ಭವಿಷ್ಯವನ್ನೇ ಲಾಘವಪಡಿಸುವ ಕೃತ್ಯವಾಗಿದೆ. ಈ ಮಾತು ಕೇಳಿದ ಯಾವುದೇ ಯುವಕನಿಗೆ ಹೇಗೆ ಭೀತಿಯು, ನೋವು ಉಂಟಾಗುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಯೋಚಿಸಬೇಕು.





























 
 

ಅದೇ ವೇಳೆ, ಪವಿತ್ರವಾದ ಜನಿವಾರವನ್ನು ಹಾಕಿಕೊಂಡಿರುವುದು ಧರ್ಮದ ಅಭಿವ್ಯಕ್ತಿಯ ಹಕ್ಕಿಗೆ ಒಳಪಡುವುದು. ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ತಮ್ಮ ಧರ್ಮವನ್ನು ಪಾಲಿಸಲು, ಅಭಿವ್ಯಕ್ತಿಪಡಿಸಲು ಹಕ್ಕು ನೀಡಿದೆಯೆಂದು ಸ್ಪಷ್ಟವಾಗಿ ಹೇಳುತ್ತದೆ. ಈ ಹಕ್ಕನ್ನು ಹಿಂಸಿಸುವ ನಡವಳಿಕೆ ಆಡಳಿತ ಯಂತ್ರದ ಕುಸಿತವನ್ನೂ ಸೂಚಿಸುತ್ತದೆ.

ಅದಕ್ಕೂ ಮೀರಿ, ಮೂರು ಅಥವಾ ಆರು ಎಳೆಯ ಜನಿವಾರ ಪರೀಕ್ಷೆಯ ವೇಳೆ ನಕಲು ಮಾಡಲು ಬಳಸಲಾಗುತ್ತದೆ ಎಂಬ ಆರೋಪ ತೀರಾ ಅಸಂಬದ್ಧ, ಅಪಹಾಸ್ಯಕಾರಿಯಾಗಿದೆ. ಇಂತಹ ಸುಳ್ಳು ಆರೋಪಗಳ ಮೂಲಕ ನಿರ್ದೋಷಿ ವಿದ್ಯಾರ್ಥಿಗಳ ಮಾನಹಾನಿ ಮಾಡುವುದು ಖಂಡನೀಯ.

ಈ ಸಂಬಂಧ ಸೂಕ್ತ ತನಿಖೆ ನಡೆಯಬೇಕು. ಈ ಮಾತು ಮಾಡಿದ ಸಿಬ್ಬಂದಿಗಳನ್ನೂ ಕೆಲಸದಿಂದ ಅಮಾನತು ಸೇರಿದಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಂತಹ ಕಾರ್ಯಗಳು ಪುನರಾವೃತಿಯಾಗದಂತೆ, ಶಿಕ್ಷಣ ಇಲಾಖೆಯು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಬೇಕು.

ಈ ಸಂಬಂಧ ಮುಂದಿನ ವಿಧಾನಪರಿಷತ್ ಕಲಾಪದಲ್ಲಿ ಈ ವಿಷಯವನ್ನು ನಾನು ಗಂಭೀರವಾಗಿ ಎತ್ತಿ ಹಿಡಿಯಲಿದ್ದೇನೆ. ಈ ಪ್ರಕರಣದಲ್ಲಿ ಪಾಲ್ಗೊಂಡ ಅಧಿಕಾರಿಗಳ ಮೇಲೆ ತನಿಖೆ ನಡೆಯಬೇಕು ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ನನ್ನ ಆಗ್ರಹವಾಗಿದೆ.

ಇದು ಒಂದು ಧಾರ್ಮಿಕ ಮತ್ತು ಮಾನವೀಯ ಸಮಸ್ಯೆಯಾಗಿದೆ. ವಿದ್ಯಾರ್ಥಿಗಳ ಆತ್ಮಗೌರವ, ಧಾರ್ಮಿಕ ನಂಬಿಕೆ ಮತ್ತು ಮಾನವೀಯತೆಯ ಕುರಿತಂತೆ ನಾವು ಎಲ್ಲರೂ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕಾಗಿದೆ. ಇಂತಹ ಘಟನೆಗಳು ಪುನರಾವೃತಿಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top