ಎಲ್‌ಕೆಜಿ ತರಗತಿಗೆ ಹಿಂದಿನ ನಿಯಮದಂತೆ ಸೇರಿರುವ ಮಕ್ಕಳಿಗೆ ಮುಂದಿನ ವರ್ಷ ಶಾಲೆಗೆ ಸೇರಲಾಗುವುದಿಲ್ಲ
ಬೆಂಗಳೂರು : ಒಂದನೇ ತರಗತಿ ಸೇರ್ಪಡೆಗೆ 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಈ ವರ್ಷದ ಮಟ್ಟಿಗೆ ಸಡಿಲಿಸಿ ಐದೂವರೆ ವರ್ಷ ಪ್ರಾಯದ ಮಕ್ಕಳನ್ನು ಶಾಲೆಗೆ ಸೇರಿಸಲು ಸರಕಾರ ಅವಕಾಶ ಮಾಡಿಕೊಟ್ಟಿದೆ. ಈ ಆದೇಶ ಮಕ್ಕಳ ಪೋಷಕರಿಗೆ ಖುಷಿ ಕೊಟ್ಟಿದ್ದರೂ ಕೆಲ ಖಾಸಗಿ ಶಾಲೆಗಳ ಒಕ್ಕೂಟ ಈ ಸಡಿಲಿಕೆಗೆ ವಿರೋಧ ವ್ಯಕ್ತಪಡಿಸಿದ್ದು, ಕೋರ್ಟ್ ಮೆಟ್ಟಿಲೇರಲು ಮುಂದಾಗಿವೆ.
ಈ ವರ್ಷ 1ನೇ ತರಗತಿ ಸೇರ್ಪಡೆಗೆ 5.5 ವರ್ಷ ತುಂಬಿರಬೇಕು ಜೊತೆಗೆ ಯುಕೆಜಿ ಅಥವಾ ಅಂಗನವಾಡಿ ಗ್ರೇಡ್ – 2 ಕಂಪ್ಲೀಟ್ ಆಗಿರಬೇಕು ಎಂದು ಶಿಕ್ಷಣ ಇಲಾಖೆ ನಿಯಮ ಮಾಡಿದೆ. ಮುಂದಿನ ವರ್ಷ ಕಡ್ಡಾಯ 6 ವರ್ಷ ಒಂದನೇ ತರಗತಿ ದಾಖಲಾತಿಗೆ ತುಂಬಿರಬೇಕು ಎಂದು ಹೇಳಿದೆ.
ಆದರೆ ಇದು ಸಿಬಿಎಸ್ಇ ಹಾಗೂ ಐಸಿಎಸ್ಇ ಶಾಲೆಗಳು ಗೊಂದಲಕ್ಕೆ ಕಾರಣವಾಗಿದೆ. ಕಳೆದ ವರ್ಷ ಸಿಬಿಎಸ್ಇ ಬೋರ್ಡ್ ಒಂದನೇ ತರಗತಿ ದಾಖಲಾತಿಗೆ ಕಡ್ಡಾಯ 6 ವರ್ಷ ತುಂಬಿರಬೇಕು ಎಂದು ಆದೇಶ ನೀಡಿತ್ತು. ಶಿಕ್ಷಣ ಇಲಾಖೆ ರಾಜ್ಯದಲ್ಲಿ ಈ ವರ್ಷಕ್ಕೆ ಸಿಮೀತಗೊಳಸಿ 5.5ಕ್ಕೆ ವಯೋಮಿತಿ ಇಳಿಕೆ ಮಾಡಿದೆ. ಸಿಬಿಎಸ್ಇ ಬೋರ್ಡ್ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಸಿಬಿಎಸ್ಇ ಶಾಲೆಗಳಿಗೆ ಒಂದನೇ ತರಗತಿಯ ದಾಖಲಾತಿಯ ಗೊಂದಲ ಉಂಟಾಗಿದೆ. ಹೀಗಾಗಿ 1ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ ವಿರೋಧಿಸಿ ಕೋರ್ಟ್ ಮೆಟ್ಟಿಲೇರಲು ಖಾಸಗಿ ಶಾಲೆಗಳ ಒಕ್ಕೂಟ ಮುಂದಾಗಿದೆ.
ಕೆಲವು ಖಾಸಗಿ ಶಾಲೆಗಳು ಸರ್ಕಾರದ ಈ ಹಿಂದಿನ ವಯೋಮಿತಿ ಪ್ರಕಾರ ದಾಖಲಾತಿ ಮಾಡಿಕೊಂಡಿವೆ. ಸರಕಾರ ಈಗ ಏಕಾಏಕಿ ಈ ನಿರ್ಧಾರಕ್ಕೆ ಬಂದಿರುವುದರಿಂದ ದೊಡ್ಡ ಸಮಸ್ಯೆಯಾಗಿದೆ. ಮುಂದಿನ ವರ್ಷಕ್ಕೂ ವಯೋಮಿತಿ ಸಡಿಲಿಕೆ ನೀಡಬೇಕಾದ ಅವಶ್ಯಕತೆ ಇದೆ ಎಂದು ಕೋರ್ಟ್ ಮೊರೆ ಹೋಗಲು ಖಾಸಗಿ ಶಾಲೆಗಳ ಒಕ್ಕೂಟ ಮುಂದಾಗಿದೆ.
ಸರ್ಕಾರ ಈ ವರ್ಷ ಮಾತ್ರ 5.5 ವಯೋಮಿತಿ ಸಡಿಲಿಕೆ ಮಾಡಿದೆ. ಜೊತೆಗೆ ಯುಕೆಜಿ ಕಂಪ್ಲೀಟ್ ಮಾಡಿರಬೇಕು ಅಂತಿದೆ. ಆದರೆ ಈಗಾಗಲೇ ಸರ್ಕಾರದ ಆದೇಶ ಪಾಲನೆ ಮಾಡಿಕೊಂಡು ಎಲ್ಕೆಜಿಗೆ ದಾಖಲಾದ ಮಕ್ಕಳ ಗತಿ ಏನು ಎಂದು ಖಾಸಗಿ ಶಾಲೆಗಳ ಒಕ್ಕೂಟ ಪ್ರಶ್ನಿಸಿದೆ. ದೇಶದಲ್ಲಿ ಈಗಾಗಲೇ 1ನೇ ತರಗತಿ ದಾಖಲಾತಿಗೆ 6 ವರ್ಷ ಪೂರ್ಣಗೊಂಡಿರಬೇಕು ಎಂಬ ನಿಯಮ ಇದೆ. ರಾಜ್ಯದಲ್ಲಿ ಮಾತ್ರ ಹೊಸ ನಿಯಮ ತಂದರೆ ಸಮಸ್ಯೆಯಾಗುತ್ತದೆ ಎನ್ನುವುದು ಖಾಸಗಿ ಶಾಲೆಗಳ ಒಕ್ಕೂಟದ ವಾದ.