ಬೀದರ್ ನಲ್ಲಿ ಇತ್ತೀಚೆಗೆ ಪರೀಕ್ಷೆ ಬರೆಯಲು ತೆರಳಿದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆಯನ್ನು ಖಂಡಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ಬೃಹತ್ ಪ್ರತಿಭಟನಾ ಸಭೆ ಅಮರ್ ಜವಾನ್ ಸ್ಮಾರಕದ ಬಳಿ ಸೋಮವಾರ ನಡೆಯಿತು.

ಶಾಂತಿ ಮಂತ್ರದೊಂದಿಗೆ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಬ್ರಾಹ್ಮಣ ಸಭಾದ ಅಧ್ಯಕ್ಷ, ನ್ಯಾಯವಾದಿ ಮಹೇಶ್ ಕಜೆ ಮಾತನಾಡಿ, ಜನಿವಾರ ಎಂಬುದು ಕೇವಲ ನೂಲಲ್ಲ. ಅದು ಬ್ರಾಹ್ಮಣರ ಅಸ್ಮಿತೆ, ಅಸ್ತಿತ್ವ. ಅದನ್ನು ಕೊನೆ ಉಸಿರಿರುವ ತನಕ ಉಳಿಸಿಕೊಳ್ಳಬೇಕಾಗಿದೆ. ಸರಕಾರದ ಕುಮ್ಮಕ್ಕಿನಿಂದ ಇಂತಹ ಜನಿವಾರವನ್ನು ಕತ್ತರಿಸುವ ಮೂಲಕ ಘೋರ ಅಪರಾಧ ಮಾಡಿದೆ. ಇದು ಅಧಿಕಾರದ ತೆವಳಿಗೆ, ರಾಜಕೀಯ ಪ್ರತಿಭಟನೆ ಅಲ್ಲ. ಬ್ರಾಹ್ಮಣರ ಅಸ್ತಿತ್ವ, ಸಂಸ್ಕಾರ, ಅಸ್ಮಿತೆಯ ಪ್ರತೀಕವನ್ನು ಉಳಿಸಕೊಳ್ಳುವ, ಗೌರವ ನೀಡುವುದಕ್ಕೆ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದ ಅವರು, ನಮ್ಮ ಸಮಾಜಕ್ಕೆ ದಕ್ಕೆ ಬಂದರೆ ಕೈಕಟ್ಟಿ ಕುಳಿತುಕೊಳ್ಳುವ ಜಾಯಮಾನ ನಮ್ಮದಲ್ಲ. ನಮ್ಮ ಸಮಾಜದ ಮೇಲೆ ಏನೂ ಮಾಡಬಹುದು ಎಂಬ ಸರಕಾರದ ಯೋಚನೆ ಬೇಡ. ಬ್ರಾಹ್ಮಣ ಹಾಗೂ ಗೋವಿನ ಮೇಲೆ ದಾಳಿ ನಡೆಸಿದರೆ ಇಡೀ ಭೂಮಿ ನಾಶವಾಗುತ್ತದೆ. ಇದೀಗ ವಿದ್ಯಾರ್ಥಿಯ ಭವಿಷ್ಯದ ಜತೆ ಆಟ ಆಡಿದ್ದಾರೆ. ಮೊನ್ನೆಯ ಘಟನೆಯ ಹಿಂದೆ ಯಾರೆಲ್ಲಾ ಇದ್ದಾರೆ, ಇದರ ಹಿಂದೆ ಇರುವ ಹುನ್ನಾರ ಮುಂದೆ ಬರಬೇಕು ಎಂದು ಅವರು ಆಗ್ರಹಿಸಿದರು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಧಾರ್ಮಿಕ ಪರಂಪರೆ ಉಳಿಸುವ ಕೆಲಸವನ್ನು ಬ್ರಾಹ್ಮಣ ಸಮಾಜ ಮಾಡಿದೆ. ಇದೀಗ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿ ತೆಗೆಯುವ ಮೂಲಕ ಇಡೀ ಹಿಂದೂ ಸಮಾಜಕ್ಕೆ ಅಪಮಾನ ಮಾಡಿದೆ. ಮುಂದಿನ ದಿನಗಳಲ್ಲಿ ಇಂತಹಾ ಘಟನೆಗಳು ನಡೆದಲ್ಲಿ ಮತ್ತೆ ಕೊಡಲಿ ಹಿಡಿಯುವ ಸಂದರ್ಭ ಬರಬಹುದು ಎಂದು ಎಚ್ಚರಿಕೆ ನೀಡಿದ ಅವರು, ಈ ನಿಟ್ಟಿನಲ್ಲಿ ಬ್ರಾಹ್ಮಣ ಸಮಾವೇಶ ಮಾಡುವ ಅಗತ್ಯವಿದೆ. ಈ ಮೂಲಕ ಸಂಘರ್ಷ ಮಾಡಲೂ ನಾವು ಸಿದ್ಧ ಎಂದರು.

ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡಿ, ಅಧಿಕಾರಿಗಳಿಗೆ ಜನಿವಾರ ಕತ್ತರಿಸುವ ಮಾನಸಿಕತೆ ಯಾಕೆ ಬಂತು ? ದೌರ್ಜನ್ಯದ ಮೂಲಕ ಏನೂ ಮಾಡಬಹುದು ಎಂಬ ಮಾನಸಿಕತೆಯನ್ನು ಸರಕಾರ ಹೊಂದಿದ್ದು, ಇದಕ್ಕೆ ಎಲ್ಲಾ ಹಿಂದೂ ಸಂಘಟನೆಗಳು ನಮ್ಮ ಮೇಲಿನ ದೌರ್ಜನ್ಯ ಎಂದು ತಿಳಿದು ಪ್ರತಿಭಟನೆ ಮೂಲಕ ಉತ್ತರ ನೀಡಬೇಕು ಎಂದು ಹೇಳಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಉದ್ಯಮಿ ಜಿ.ಎಲ್.ಬಲರಾಮ ಆಚಾರ್ಯ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ, ಡಾ.ಸುರೇಶ್ ಪುತ್ತೂರಾಯ, ನ್ಯಾಯವಾದಿ ಜಗನ್ನಿವಾಸ ರಾವ್, ಗೋಪಾಲಕೃಷ್ಣ ಹೇರಳೆ, ಮುಳಿಯ ಕೇಶವ ಪ್ರಸಾದ್, ವಿದ್ಯಾ ಆರ್. ಗೌರಿ ಮಾತನಾಡಿದರು.
ವೇದಿಕೆಯಲ್ಲಿ ಉದ್ಯಮಿ ಸತ್ಯಶಂಕರ ಭಟ್ ಉಪಸ್ಥಿತರಿದ್ದರು. ಶಿವಶಂಕರ ಭಟ್ ಸ್ವಾಗತಿಸಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ಒಂದೂ ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಬಳಿಕ ಪ್ರತಿಭಟನೆಯಲ್ಲಿ ನೆರೆದಿದ್ದವರು ಮಿನಿ ವಿಧಾನಸೌಧದ ಎದುರು ತೆರಳಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಮನವಿಯನ್ನು ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಅವರಿಗೆ ನೀಡಿದರು.