ರಕ್ತ ಕಣ್ಣೀರು ಸಿನಿಮಾದಂತಿದೆ ಸರಕಾರದ ವರದಿ ಎಂದು ಲೇವಡಿ
ಬೆಂಗಳೂರು: ಜಾತಿ ಗಣತಿ ವರದಿಯ ಮೂಲಪ್ರತಿ ಇಲ್ಲ ಎಂದು ಆಯೋಗದ ಅಧ್ಯಕ್ಷರೇ ಹೇಳಿದ್ದಾರೆ. ಹೀಗಾಗಿ ಸರ್ಕಾರ ಬಹಿರಂಗಗೊಳಿಸಿರುವ ಜಾತಿ ಗಣತಿ ವರದಿ ನಕಲಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ಈಗ ಮಂಡನೆಯಾದ ದತ್ತಾಂಶಗಳ ವರದಿ ನಕಲಿ ಎಂಬುದಕ್ಕೆ ಪುರಾವೆಯಿದೆ. ಹಿಂದುಳಿದ ವರ್ಗಗಳ ಆಯೋಗದ ಅಂದಿನ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆಯವರು 2021, ಅಕ್ಟೋಬರ್ 5ರಂದು ಸರ್ಕಾರಕ್ಕೆ ಬರೆದಿದ್ದ ಪತ್ರದ ಪ್ರಕಾರ ಮೂಲ ಅಥವಾ ಹಸ್ತಪ್ರತಿಯೇ ಇಲ್ಲ. ಸೀಲ್ಡ್ ಪೆಟ್ಟಿಗೆಯನ್ನು ಮಹಜರು ಮಾಡಿ ಅಧ್ಯಕ್ಷ, ಸದಸ್ಯರ ಸಮಕ್ಷಮ ತೆರೆದಾಗ ಸೀಲ್ಡ್ ಪೆಟ್ಟಿಗೆಯಲ್ಲಿಟ್ಟಿದ್ದ ಪ್ರತಿಯ ಮೇಲೆ ಸದಸ್ಯ ಕಾರ್ಯದರ್ಶಿ ಸಹಿಯೇ ಇಲ್ಲವೆಂಬುದನ್ನು ತಿಳಿಸಿದ್ದಾರೆಂದು ಹೇಳಿದರು.
ಸರ್ಕಾರ ಈಗ ಹೇಳಲಿ ಈ ಜಾತಿಗಣತಿ ವರದಿ ವರ್ಜಿನಲ್ಲಾ? ಮೂಲ ವರದಿಯ ಹಸ್ತಪ್ರತಿಯೇ ಸೀಲ್ಡ್ ಪೆಟ್ಟಿಗೆಯಲ್ಲಿ ಇಲ್ಲ ಎಂದ ಮೇಲೆ ವರದಿ ಹೇಗೆ ವರ್ಜಿನಲ್ ಆಗುತ್ತದೆ? ಇದು ರಕ್ತ ಕಣ್ಣೀರು ಸಿನಿಮಾ ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಜಾತಿಗಣತಿ ವಿಚಾರವನ್ನು ಹೊರಗೆ ತಂದರು. ಅವರು ಯಾವಾಗ ಬೇಕೋ ಆಗ ವರದಿ ನೀಡುತ್ತಾರೆ. ಇದಕ್ಕೆ ತಮ್ಮೊಂದಿಗೆ ನಾಟಕ ಕಂಪನಿಯನ್ನು ಇಟ್ಟುಕೊಂಡಿದ್ದಾರೆ. ಇದು ಶಕುನಿ ಸರ್ಕಾರ. ಅಭಿವೃದ್ಧಿ ಬೇಕಾಗಿಲ್ಲ ಎಂದು ಟೀಕಿಸಿದರು.
ಆಯೋಗದ ಅಧ್ಯಕ್ಷರೇ ವರದಿಯ ಮೂಲಪ್ರತಿ ಇಲ್ಲ ಎಂದಿದ್ದಾರೆ. ಅವರು ಸಮೀಕ್ಷೆ ಮಾಡಿದ್ದು 6 ಕೋಟಿ ಜನರನ್ನು. ಉಳಿದ ಒಂದು ಕೋಟಿ ಜನರಿಗೆ ನಾಮವೇ? ಜಾತಿಗಣತಿಯ ವರ್ಜಿನಲ್ ಪ್ರತಿ ಸಿದ್ದರಾಮಯ್ಯನವರ ಮನೆಯಲ್ಲಿದೆ. ಈಗ ಮಂಡಿಸಿರುವ ವರದಿ ನಕಲಿ ಎಂದು ಆರೋಪಿಸಿದರು.
ಸಮೀಕ್ಷೆ ನಡೆಸಿದ ಮೂಲ ವರದಿ ಪ್ರತಿ ಕಾಣೆಯಾಗಿದ್ದರ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಬೇಕು. ಸಮೀಕ್ಷೆಯ ದಾಖಲೆಗಳು, 165 ಕೋಟಿ ರೂ ಖರ್ಚು ಮಾಡಿದ್ದು ಹೇಗೆಂಬುದು ಈ ತನಿಖೆಯ ವ್ಯಾಪ್ತಿಗೆ ತರಬೇಕು. ನಕಲಿ ವರದಿಯನ್ನೇ ಹಲವು ಸಚಿವರು ವೈಜ್ಞಾನಿಕ, ನಿಖರವೆಂದು ಹೇಳುತ್ತಿರುವುದು ಹಾಸ್ಯಾಸ್ಪದವೆಂದು ವ್ಯಂಗ್ಯವಾಡಿದರು.