ಸೋಷಿಯಲ್ ಮೀಡಿಯಾದಲ್ಲಿ ನಡೆದ ಜಟಾಪಟಿಯ ಪರಿಣಾಮ
ಬೆಳ್ತಂಗಡಿ: ಶನಿವಾರ ರಾಮೋತ್ಸವದಲ್ಲಿ ಭಾಗವಹಿಸಲು ಉಜಿರೆಗೆ ಆಗಮಿಸಿದ್ದ ಹಿಂದು ಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಅವರನ್ನು ತಡೆದು ನಿಲ್ಲಿಸಿ ವಾಪಸು ಹೋಗಲು ಹೇಳಿದ ಘಟನೆಗೆ ಸಂಬಂಧಿಸಿ ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉಜಿರೆ ನಿವಾಸಿಗಳಾದ ಅನಿಲ್ ಅಂತರ, ಮನೋಜ್ ಕುಂಜರ್ಪ, ಪ್ರಜ್ವಲ್ ಗೌಡ, ಪ್ರಭಾಕರ, ಗಣೇಶ್ ಹಾಗೂ ಇತರರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯ ಎಸ್‌ಐ ಮುರಳೀಧರ ನಾಯ್ಕ್ ಕೆ.ಜಿ. ಅವರ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.
ಪುನೀತ್ ಕೇರೆಹಳ್ಳಿ ಉಜಿರೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ಶಾಂತಿ ಭಂಗ ಉಂಟು ಮಾಡುವ ಸಾಧ್ಯತೆ ಇದ್ದ ಕಾರಣ ಸಾರ್ವಜನಿಕ ಹಿತದೃಷ್ಟಿಯಿಂದ ಅವರು ದ.ಕ. ಜಿಲ್ಲೆಯ ಸರಹದ್ದಿನೊಳಗೆ ಪ್ರವೇಶಿಸದಂತೆ ಕಲಂ 163 ಬಿ.ಎನ್.ಎಸ್ 2023ರಂತೆ ನಿರ್ಬಂಧ ವಿಧಿಸಿ ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ಆದರೆ ಈ ಆದೇಶವನ್ನು ಉಲ್ಲಂಘಿಸಿ ಶನಿವಾರ ಸಂಜೆಯ ವೇಳೆ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಬಳಿ ಸಾರ್ವಜನಿಕ ರಸ್ತೆಗೆ ಪುನೀತ್ ಆಗಮಿಸಿದ್ದರು. ಈ ವೇಳೆ ಮಹೇಶ್ ಶೆಟ್ಟಿ ತಿಮರೋಡಿಯ ಬೆಂಬಲಿಗರಾದ ಅನಿಲ್ ಅಂತರ, ಮನೋಜ್ ಕುಂಜರ್ಪ, ಪ್ರಜ್ವಲ್ ಗೌಡ ಹಾಗೂ ಇತರರು ಗುಂಪು ಸೇರಿಕೊಂಡು ಉಜಿರೆ ಎಸ್.ಡಿ.ಎಂ. ಕಾಲೇಜಿನ ಎದುರಿನ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಅಕ್ರಮ ಕೂಟ ಸೇರಿದ್ದಾರೆ. ಶಾಂತಿ ಭಂಗ ತರುವ ಉದ್ದೇಶದಿಂದ ಪುನೀತ್ ಕೆರೆಹಳ್ಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸುಗಮ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸೌಜನ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ಮತ್ತು ಮಹೇಶ್ ತಿಮರೋಡಿ ಬೆಂಬಲಿಗರ ನಡುವೆ ಸೋಷಿಯಲ್ ಮೀಡಿಯಾ, ಫೋನ್ ಕರೆಗಳ ಮೂಲಕ ಕಳೆದ ಕೆಲ ಸಮಯದಿಂದ ತೀವ್ರ ಜಟಾಪಟಿ ನಡೆಯುತ್ತಿದೆ. ದಮ್ಮು ಇದ್ದರೆ ಬೆಳ್ತಂಗಡಿಗೆ ಬಂದು ನೋಡು ಎಂದು ಪುನೀತ್ ಕೆರೆಹಳ್ಳಿಗೆ ತಿಮರೋಡಿ ಬೆಂಬಲಿಗರು ಸವಾಲು ಹಾಕಿದ್ದರು. ಈ ಸವಾಲು ಸ್ವೀಕರಿಸಿ ನಿನ್ನೆ ಪುನೀತ್ ಕೆರೆಹಳ್ಳಿ ಉಜಿರೆಗೆ ಬಂದಾಗ ಅವರನ್ನು ತಡೆಯುವ ಪ್ರಯತ್ನವಾಗಿದ್ದು, ಈ ವಿಚಾರವಾಗಿ ಕೊಂಚ ಹೊತ್ತು ಅಲ್ಲಿ ಬಿಗುವಿನ ವಾತಾವರಣ ನೆಲೆಸಿತ್ತು. ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಡದೆ ವಾಪಸು ಕಳುಹಿಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಇನ್ನೋರ್ವ ಹಿಂದುತ್ವ ಹೋರಾಟಗಾರ ಚಕ್ರವರ್ತಿ ಸೂಲಿಬೆಲೆ ಭಾಗವಹಿಸಿದ್ದಾರೆ.