ಮಂಗಳೂರಿನ ವ್ಯಕ್ತಿಯೊಬ್ಬರ ಮೇಲೂ ಇದೆ ಅನುಮಾನದ ನೋಟ
ರಾಮನಗರ : ಬಿಡದಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ಮಾಜಿ ಡಾನ್ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ನಿನ್ನೆ ಮಧ್ಯರಾತ್ರಿ ನಡೆದಿದೆ. ಈ ದಾಳಿಯಲ್ಲಿ ರಿಕ್ಕಿ ರೈ ಅವರಿಗೆ ತೀವ್ರ ಗಾಯಗಳಾಗಿದ್ದು, ಅವರೊಂದಿಗಿದ್ದ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಿಕ್ಕಿ ರೈ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬೆನ್ನಿಗೆ ರಿಕ್ಕಿ ರೈ ಮೇಲೆ ದಾಳಿಯಾಗಲು ಕಾರಣ ಏನು ಎನ್ನುವ ಕುತೂಹಲ ಹುಟ್ಟಿಕೊಂಡಿದೆ. ಪೊಲೀಸರು ಈ ಪ್ರಕರಣವನ್ನು ವಿವಿಧ ಆಯಾಮಗಳಿಂದ ತನಿಖೆ ಮಾಡುತ್ತಿದ್ದಾರೆ. ಮುತ್ತಪ್ಪ ರೈ ಅವರ ಭೂಗತ ಲೋಕದ ಹಿನ್ನೆಲೆಯಿಂದ ರಿಕ್ಕಿ ರೈ ಟಾರ್ಗೆಟ್ ಆಗಿದ್ದಾರಾ? ರಿಕ್ಕಿ ರೈ ಅವರ ಬ್ಯುಸಿನೆಸ್ ವಿಷಯಕ್ಕೆ ಸಂಬಂಧಿಸಿದಂತೆ ಫೈರಿಂಗ್ ನಡೆದಿದೆಯಾ? ಹಳೆಯ ದ್ವೇಷದಿಂದ ರಿಕ್ಕಿ ರೈ ವಿರುದ್ಧ ದಾಳಿ ನಡೆಸಲಾಗಿದೆಯಾ? ಹಣಕಾಸಿನ ಗಲಾಟೆಯಿಂದ ಕೊಲೆಗೆ ಸಂಚು ರೂಪಿಸಲಾಗಿದೆಯಾ? ವೈಯಕ್ತಿಕ ದ್ವೇಷದಿಂದ ಈ ದಾಳಿ ನಡೆದಿದೆಯಾ? ಅಥವಾ ರಿಯಲ್ ಎಸ್ಟೇಟ್ ವಿವಾದದಿಂದ ದಾಳಿ ಆಗಿರಬಹುದಾ? ಹೀಗೆ ಈ ಎಲ್ಲ ಆಯಾಮಗಳಿಂದ ಪೊಲೀಸರು ತನಿಖೆಗೆ ಇಳಿದಿದ್ದಾರೆ. ಐದು ವರ್ಷದ ಹಿಂದೆ ರಿಕ್ಕಿ ರೈ ಮನೆಗಳ ಮೇಲೆ ಡ್ರಗ್ಸ್ ನಂಟಿನ ಅನುಮಾನದ ಹಿಂದೆ ಪೊಲೀಸರು ದಾಳಿ ಮಾಡಿ ಶೋಧ ಕಾರ್ಯ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಡ್ರಗ್ಸ್ ನಂಟು ಇದೆಯಾ ಎಂಬ ಆಯಾಮದತ್ತಲೂ ಪೊಲೀಸರು ಗಮನ ಹರಿಸಿದ್ದಾರೆ.
ಮುತ್ತಪ್ಪ ರೈ ಸುಮಾರು 2000 ಕೋಟಿ ರೂ. ಆಸ್ತಿ ಬಿಟ್ಟುಹೋಗಿದ್ದು ಇದರ ಸುತ್ತ ವಿವಾದದ ಕವಿದಿದೆ. ಈ ಹಿನ್ನೆಲೆಯಲ್ಲಿ ರಿಕ್ಕಿ ರೈ ಕೊಲೆಗೆ ಯತ್ನ ನಡೆದಿರಬಹುದು ಎಂಬ ಅನುಮಾನವೂ ಇದೆ. ಮುತ್ತಪ್ಪ ರೈ ಅವರು ಬೆಂಗಳೂರು, ಗೋವಾ, ಮೈಸೂರು, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ವ್ಯಾಪಕ ಬ್ಯುಸಿನೆಸ್ ಹೊಂದಿದ್ದರು. ಈಗ ಈ ಬ್ಯುಸಿನೆಸ್‌ನ್ನು ರಿಕ್ಕಿ ರೈ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಾಳಿಯ ಕಾರಣಗಳನ್ನು ಪೊಲೀಸರು ಆಳವಾಗಿ ಪರಿಶೀಲಿಸುತ್ತಿದ್ದಾರೆ.
ಮುತ್ತಪ್ಪ ರೈ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಂಗಳೂರು ಮೂಲದ ವ್ಯಕ್ತಿಯೊಬ್ಬರ ಹೆಸರೂ ತನಿಖೆ ವೇಳೆ ಪ್ರಸ್ತಾವಕ್ಕೆ ಬಂದಿದೆ ಎಂದು ತಿಳಿದುಬಂದಿದೆ. ಅವರ ಪಾತ್ರದ ಬಗ್ಗೆ ರಾಮನಗರ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಹಲವು ವರ್ಷಗಳ ಕಾಲ ಮುತ್ತಪ್ಪ ರೈ ಅವರ ರೈಟ್‌ಹ್ಯಾಂಡ್ ಆಗಿ ಕೆಲಸ ಮಾಡಿದ್ದ ಈ ವ್ಯಕ್ತಿ ಆಸ್ತಿ ವಿಚಾರದಲ್ಲಿ ಉಂಟಾದ ಕಿರಿಕ್‌ನಿಂದಾಗಿ ಅವರಿಂದ ದೂರವಾಗಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ತಕ್ಷಣ ಆಗಮಿಸಿದ ಪೊಲೀಸ್ ಶ್ವಾನ ದಳ ಫೈರಿಂಗ್ ಸ್ಥಳದಿಂದ ಸುಮಾರು 2 ಕಿ.ಮೀ ದೂರದ ಹೆಗ್ಗಡಗೆರೆವರೆಗೆ ಕರೆದೊಯ್ದಿದೆ. ಶ್ವಾನವು ಕಾಂಪೌಂಡ್‌ನಿಂದ ಹೊರಗೆ ಓಡಿ, ದೊಡ್ಡ ಮುದುವಾಡಿ ಕಡೆಗೆ ಸಾಗಿ, ಹೆಗ್ಗಡಗೆರೆಯಲ್ಲಿ ನಿಂತಿದೆ. ಇದರಿಂದ ಆಗಂತುಕರು ವಾಹನದಲ್ಲಿ ಬಂದು ದಾಳಿ ನಡೆಸಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಚಿನಲ್ಲಿ ಶಾರ್ಪ್ ಶೂಟರ್‌ಗಳನ್ನು ಬಳಸಿಕೊಂಡು ರಿಕ್ಕಿ ರೈ ಅವರನ್ನು ಗುರಿಯಾಗಿಸಲಾಗಿತ್ತು, ಇದರಲ್ಲಿ ಡ್ರೈವಿಂಗ್ ಸೀಟ್ ಅನ್ನು ನಿಖರವಾಗಿ ಟಾರ್ಗೆಟ್ ಮಾಡಲಾಗಿದೆ.
ಘಟನೆ ಸಂಬಂಧ ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ ಪ್ರತಿಕ್ರಿಯಿಸಿದ್ದು, ಮಧ್ಯರಾತ್ರಿ ರಿಕ್ಕಿ ರೈ ಮನೆಯಿಂದ ಹೊರಗೆ ಹೋಗುವ ವೇಳೆ ಘಟನೆ ನಡೆದಿದೆ. ಮೇಲ್ನೋಟಕ್ಕೆ ಒಂದು ಸುತ್ತು ಫೈರಿಂಗ್ ಆಗಿರುವ ಶಂಕೆಯಿದೆ. ರಿಕ್ಕಿ ರೈಗೆ ತೀವ್ರ ಗಾಯವಾಗಿದ್ದು, ಅವರೊಂದಿಗಿದ್ದ ಒಬ್ಬರಿಗೆ ಸಣ್ಣ ಗಾಯಗಳಾಗಿವೆ. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ ಎಂದರು.
ಆರೋಪಿಗಳ ಪತ್ತೆಗೆ 5 ತಂಡಗಳು ರಚನೆ
ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ಐದು ತಂಡಗಳನ್ನು ರಚಿಸಲಾಗಿದೆ. ತಡರಾತ್ರಿ 1 ಗಂಟೆ ಸುಮಾರಿಗೆ ಬಿಡದಿಯ ಫಾಮ್‌ಹೌಸ್‌ನಿಂದ ಪಬ್‌ಗೆ ತೆರಳಲು ಹೊರಬಂದ ರಿಕ್ಕಿ ರೈ, ಅವರ ಗನ್‌ಮ್ಯಾನ್ ಮತ್ತು ಡ್ರೈವರ್ ಮೇಲೆ ಶಾರ್ಪ್ ಶೂಟರ್‌ಗಳು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಡ್ರೈವರ್ ಮತ್ತು ಗನ್‌ಮ್ಯಾನ್ ಬಳಿ ಹೇಳಿಕೆ ದಾಖಲಿಸಿ, ದಾಳಿಯ ಸಂಖ್ಯೆ, ಆಗಮನದ ವಿಧಾನ ಸೇರಿದಂತೆ ಮಾಹಿತಿ ಕಲೆಹಾಕಿದ್ದಾರೆ. ತಂಡ 1 ಶೂಟರ್‌ಗಳು ಬಂದ ರಸ್ತೆಯ ಸಿಸಿಟಿವಿ ಪರಿಶೀಲಿಸುತ್ತಿದ್ದರೆ, ತಂಡ 2 ಫಾಮ್‌ಹೌಸ್ ಬಳಿಯ ಸಿಡಿಆರ್ ಸಂಗ್ರಹಿಸುತ್ತಿದೆ. ತಂಡ 3 ರಿಕ್ಕಿ ರೈ ಮೇಲೆ ಹಳೇ ದ್ವೇಷ ಹೊಂದಿರುವವರನ್ನು ಪತ್ತೆ ಮಾಡುತ್ತಿದ್ದು, ತಂಡ 4 ಕುಟುಂಬಸ್ಥರ ಬಳಿ ಮಾಹಿತಿ ಕಲೆಹಾಕುತ್ತಿದೆ. ತಂಡ 5 ಸ್ಥಳದಲ್ಲಿ ಬೀಡುಬಿಟ್ಟು ಮಾನಿಟರಿಂಗ್ ನಡೆಸುತ್ತಿದೆ.