ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದ ರಿಕ್ಕಿ ರೈ
ರಾಮನಗರ : ಮುತ್ತಪ್ಪ ರೈಯವರ ಪುತ್ರ ರಿಕ್ಕಿ ರೈ ಮೇಲೆ ನಿನ್ನೆ ಮಧ್ಯರಾತ್ರಿ ರಾಮನಗರ ತಾಲೂಕಿನ ಬಿಡದಿಯ ಅವರ ಮನೆ ಬಳಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿ ನಾಲ್ಕು ಮಂದಿಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ರಿಕ್ಕಿ ರೈಗೆ ಚಿಕಿತ್ಸೆ ನಡೆಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ರಾಮನಗರ ತಾಲೂಕಿನ ಬಿಡದಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಘಟನೆ ವೇಳೆ ಚಾಲಕ ಬಸವರಾಜ್ ಕಾರು ಚಾಲನೆ ಮಾಡುತ್ತಿದ್ದರು. ಫೈರಿಂಗ್ ಆಗುತ್ತಿದ್ದಂತೆ ಅವರು ಮುಂದೆ ಬಾಗಿದ್ದಾರೆ. ಹಾಗಾಗಿ ಕೂದಳೆಲೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸವರಾಜ್ ದೂರು ಆಧರಿಸಿ ರಾಕೇಶ್ ಮಲ್ಲಿ, ಮುತ್ತಪ್ಪ ರೈಯವರ ಎರಡನೇ ಪತ್ನಿ ಅಂದರೆ ರಿಕ್ಕಿ ರೈಯವರ ಮಲತಾಯಿ ಅನುರಾಧಾ, ನಿತೇಶ್ ಶೆಟ್ಟಿ ಹಾಗೂ ವೈದ್ಯನಾಥನ್ ಎಂಬವರ ವಿರುದ್ಧ ಕೇಸ್ ದಾಖಲಾಗಿದೆ.
ಭದ್ರಕೋಟೆಯಂತೆ ಇರುವ ಮುತ್ತಪ್ಪ ರೈ ಅವರ ಮನೆಯಿಂದ ಹೊರಬರ್ತಿದ್ದಂತೆ ರಸ್ತೆಯಲ್ಲಿ ಕಾರಿನ ಮೇಲೆ ಅಟ್ಯಾಕ್ ನಡೆದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಫೈರಿಂಗ್ ಹಿಂದೆ ಭೂಗತ ಲೋಕದ ಶಾರ್ಪ್ಪಶೂಟರ್‌ಗಳನ್ನು ಬಳಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಪೊಲೀಸರು ಮನೆ ನೌಕರರು, ಆಪ್ತರ ಹೇಳಿಕೆ ಪಡೆದುಕೊಂಡಿದ್ದಾರೆ. ರಿಕ್ಕಿ ರೈ ವಿದೇಶದಿಂದ ಬಂದಿದ್ದು ಯಾವಾಗ, ವ್ಯವಹಾರಗಳೇನು? ಇತ್ತೀಚೆಗೆ ಯಾವುದಾದರೂ ವ್ಯವಹಾರದಲ್ಲಿ ಗಲಾಟೆ ಆಗಿತ್ತಾ? ರಾಮನಗರ ತಾಲೂಕಿನ ಬಿಡದಿ ಮನೆಯಲ್ಲಿ ಯಾರ್ಯಾರು ಇದ್ದಾರೆ? ರಿಕ್ಕಿ ಮನೆಗೆ ಹೊಸದಾಗಿ ಯಾರಾದರು ಕೆಲಸಕ್ಕೆ ಸೇರಿಕೊಂಡಿದ್ರಾ? ಹಳೇ ದ್ವೇಷ, ಅಸ್ತಿ ವಿವಾದ, ವ್ಯವಹಾರ ಕುರಿತು ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಮುತ್ತಪ್ಪ ರೈ ಸಾವಿನ ಬಳಿಕ ಆಸ್ತಿ ವ್ಯಾಜ್ಯವಿತ್ತು. ಮೊದಲ ಪತ್ನಿ ಮತ್ತು ಎರಡನೇ ಪತ್ನಿ ಮಕ್ಕಳ ನಡುವೆ ಆಸ್ತಿ ವಿಚಾರಕ್ಕೆ ವ್ಯಾಜ್ಯವಿತ್ತು. ಹೀಗಾಗಿ ಆಸ್ತಿ ಭಾಗದ ವಿಚಾರವಾಗಿ ಕುಟುಂಬ ಕೋರ್ಟ್ ಮೆಟ್ಟಿಲೇರಿತ್ತು. ಮುತ್ತಪ್ಪ ರೈ ಸಾವಿಗೂ ಮುನ್ನ ಇಬ್ಬರು ಮಕ್ಕಳು, ಸಹೋದರನ ಮಗ, ಎರಡನೇ ಪತ್ನಿ, ಮನೆ ಕೆಲಸಗಾರರು ಸೇರಿ ಎಲ್ಲರಿಗೂ ಆಸ್ತಿ ಭಾಗ ಮಾಡಿ ವಿಲ್ ಬರೆಸಲಾಗಿತ್ತು.
ಮುತ್ತಪ್ಪ ರೈ ಬದುಕಿರುವಾಗಲೇ ರಿಕ್ಕಿ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು. ಆದರೆ ಎರಡನೇ ಪತ್ನಿ ವಿದೇಶದವರು, ಅವರು ಮಗು ಜತೆ ವಿದೇಶದಲ್ಲಿದ್ದಾರೆ. ರಿಕ್ಕಿ ರೈ ಕೂಡ ಹೆಚ್ಚಿನ ಸಮಯ ವಿದೇಶದಲ್ಲೇ ಕಳೆಯುತ್ತಿದ್ದರು.