ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ : ಕಮಿಷನರ್‌ ತಿಳಿಸಿದ ಮಹತ್ವದ ಮಾಹಿತಿ

ಸಹಾಯ ಕೇಳಿದವಳ ಮೇಲೆ ಮದ್ಯ ಕುಡಿಸಿ ಅತ್ಯಾಚಾರ ಮಾಡಿದ ರಿಕ್ಷಾ ಚಾಲಕ ಮತ್ತವನ ಸ್ನೇಹಿತರು

ಉಳ್ಳಾಲ: ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಶ್ಚಿಮ ಬಂಗಾಳದ ಯುವತಿಯೊಬ್ಬಳ ಮೇಲೆ ರಿಕ್ಷಾ ಚಾಲಕ ಹಾಗೂ ಅವನ ಇಬ್ಬರು ಸ್ನೇಹಿತರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಬುಧವಾರ ತಡರಾತ್ರಿ ಉಳ್ಳಾಲ ಪೊಲೀಸ್ ಠಾಣೆ ಸಮೀಪ ಈ ಘಟನೆ ನಡೆದಿದ್ದು, ಮಧ್ಯಾರಾತ್ರಿ 1.30 ಸುಮಾರಿಗೆ 112ಕ್ಕೆ ಕರೆ ಮಾಡಿ ಓರ್ವ ಯುವತಿ ಕೂಗಾಡುತ್ತಿದ್ದಾಳೆ, ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದರು. ತಕ್ಷಣವೇ ಹೊಯ್ಸಳ ಘಟನಾ ಸ್ಥಳಕ್ಕೆ ತೆರಳಿ ಯುವತಿಯನ್ನು ಪೊಲೀಸ್ ಠಾಣೆಗೆ ಕರೆತಂದಿದೆ. ಅವಳು ಮಾತನಾಡುವ ಸ್ಥಿತಿಯಲ್ಲಿರದ ಕಾರಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾತ್ರಿ ಯಾರೋ ಅವಳಿಗೆ ಮದ್ಯಪಾನ ಮಾಡಿಸಿದಾಗ ಪ್ರಜ್ಞೆ ತಪ್ಪಿದ್ದು, ಕಾರಲ್ಲಿ ಮೂರು ಜನ ಇದ್ದಿದ್ದಾಗಿ ಯುವತಿ ತಿಳಿಸಿದ್ದಾಳೆ. ಪ್ರಜ್ಞೆ ಬಂದ ನಂತರ ಅವಳ ಒಳಉಡುಪು ಇರಲಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾಳೆ. ಪ್ರಜ್ಞೆ ಬಂದು ಅವಳು ಕೂಗಾಡಲು ಶುರು ಮಾಡಿದಾಗ ಅವರು ಆಕೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಆ ಬಳಿಕ ಸ್ಥಳೀಯರ ಸಹಾಯದೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದಾಳೆ.
ಪಶ್ಚಿಮ ಬಂಗಾಳದ ಕೂಚ್‌ಬಿಹಾರ್ ಮೂಲದವಳಾದ ಯುವತಿ 2-3 ವರ್ಷಗಳಿಂದ ಕೇರಳದ ಫ್ಲೆವುಡ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಮಂಗಳೂರಿನಲ್ಲಿ ಬೇರೆ ಸಂಸ್ಥೆಯಲ್ಲಿ ಕೆಲಸದ ಅವಕಾಶವಿದ್ದ ಕಾರಣ ಗೆಳೆಯನ ಜೊತೆ ಬುಧವಾರ ಬೆಳಗ್ಗೆ ಮಂಗಳೂರಿಗೆ ಬಂದಿದ್ದಳು. ಈ ವೇಳೆ ಗೆಳೆಯನ ಜೊತೆಗೆ ಜಗಳವಾಗಿ ಆತ ಈಕೆಯ ಮೊಬೈಲಿಗೆ ಹಾನಿ ಮಾಡಿದ್ದ. ಮೊಬೈಲ್ ರಿಪೇರಿಗೆಂದು ಆಟೋ ಹಿಡಿದು ಮೊಬೈಲ್ ಅಂಗಡಿಗೆ ತೆರಳಿದ್ದಾಳೆ. 5-6 ಗಂಟೆಗಳ ಕಾಲ ಆಕೆ ಆಟೋ ಡ್ರೈವರ್‌ ಜೊತೆಗೆ ಇದ್ದು, ಅವನ ಜೊತೆಗೆ ಗೆಳೆತನ ಆಗಿದೆ. ಮೊಬೈಲ್ ರಿಪೇರಿ ಹಣ ಕೂಡಾ ಆತನೇ ಪಾವತಿಸಿದ್ದ. ಆ ಬಳಿಕ ಆಕೆ ರಾತ್ರಿ ವೇಳೆ ಪಶ್ಚಿಮ ಬಂಗಾಳಕ್ಕೆ ಹೋಗಲು ರೈಲ್ವೆ ನಿಲ್ದಾಣಕ್ಕೆ ಬಿಡಲು ಆಟೋ ಡ್ರೈವರ್‌ಗೆ ಹೇಳಿದ್ದಾಳೆ. ಆದರೆ ಕಂಕನಾಡಿ ರೈಲ್ವೆ ನಿಲ್ದಾಣಕ್ಕೆ ಹೋಗದೆ ಆಟೋ ಡ್ರೈವರ್ ಮತ್ತಿಬ್ಬರ ಗೆಳೆಯರನ್ನು ಕರೆಸಿ ಬೇರೊಂದು ಜಾಗಕ್ಕೆ ಹೋಗುತ್ತಾರೆ. ಆ ಜಾಗದಲ್ಲಿ ಆಕೆಗೆ ಮದ್ಯಪಾನ ಮಾಡಿಸಿ, ಆಕೆ ಪ್ರಜ್ಞೆ ತಪ್ಪಿದ್ದು, ಪ್ರಜ್ಞೆ ಬಂದಾಗ ಅತ್ಯಾಚಾರ ನಡೆದಿರುವುದು ಆಕೆ ಗಮನಕ್ಕೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಮೂಲ್ಕಿ ನಿವಾಸಿ 10 ವರ್ಷಕ್ಕಿಂತ ಹೆಚ್ಚು ಕಾಲ ಮಂಗಳೂರಿನಲ್ಲಿ ಆಟೋ ಚಾಲಕನಾಗಿ ದುಡಿಯುತ್ತಿದ್ದ ಪ್ರಭುರಾಜ್ (38), ಕುಂಪಲ ನಿವಾಸಿ ಇಲೆಕ್ಟ್ರಿಷಿಯನ್ ಮಿಥುನ್ (30) ಹಾಗೂ ಮಂಗಳೂರಿನಲ್ಲಿ ವಾಸವಾಗಿರುವ ಮಣಿ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಯುವತಿ ತನ್ನ ಹೇಳಿಕೆಯಲ್ಲಿ ತನ್ನ ಮೇಲೆ ಅತ್ಯಾಚಾರ ಆಗಿರುವುದಾಗಿ ಹೇಳಿದ್ದಾಳೆ. ವೈದ್ಯಕೀಯ ವರದಿ ಬಂದ ಬಳಿಕ ಅತ್ಯಾಚಾರ ಆಗಿರುವುದನ್ನು ದೃಢಪಡಿಸಲಾಗುವುದು ಎಂಬುವುದಾಗಿ ಕಮೀಷನರ್‌ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top