ಉಡುಗೊರೆ, ಪಾರ್ಟಿಗಳ ಮೂಲಕ ಆಟಗಾರರನ್ನು ಸೆಳೆಯಲು ಯತ್ನಿಸುತ್ತಿರುವ ಉದ್ಯಮಿ
ಮುಂಬಯಿ: ಐಪಿಎಲ್ ಮೇಲೆ ಮತ್ತೊಮ್ಮೆ ಫಿಕ್ಸಿಂಗ್ ಕರಿನೆರಳು ಆವರಿಸಿದೆ. ಹೈದರಾಬಾದ್ ಮೂಲದ ಉದ್ಯಮಿಯೊಬ್ಬ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಪಂದ್ಯಗಳನ್ನು ಫಿಕ್ಸ್ ಮಾಡಲು ಯತ್ನಿಸುತ್ತಿದ್ದಾನೆ ಎಂಬ ಗುಪ್ತ ಮಾಹಿತಿ ಸಿಕ್ಕಿದ ಬಳಿಕ ಬಿಸಿಸಿಐ ಅಲರ್ಟ್ ಆಗಿದೆ.
ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ ಐಪಿಎಲ್ ಲೀಗ್‌ನ ಎಲ್ಲ 10 ತಂಡಗಳಿಗೆ ಫಿಕ್ಸಿಂಗ್ ಬಗ್ಗೆ ಎಚ್ಚರಿಕೆ ರವಾನಿಸಿ ಉದ್ಯಮಿ ಯಾವುದೇ ರೀತಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೆ ಕೂಡಲೇ ತಿಳಿಸಿ ಎಂದು ಸೂಚಿಸಿದೆ.
ಉದ್ಯಮಿ ಯಾರು ಎನ್ನುವುದು ಬಹಿರಂಗವಾಗಿಲ್ಲ. ಆದರೆ ಈ ಉದ್ಯಮಿ ಬುಕ್ಕಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದಾನೆ. ಈ ಹಿಂದೆಯೂ ಬುಕ್ಕಿಗಳ ಜೊತೆ ಆ ಉದ್ಯಮಿಗೆ ಸಂಪರ್ಕ ಇತ್ತು ಎನ್ನಲಾಗಿದೆ. ಅಭಿಮಾನಿಯಂತೆ ಸೋಗುಹಾಕಿ ದುಬಾರಿ ಆಭರಣ ಮತ್ತಿತರ ಉಡುಗೊರೆಗಳನ್ನು ನೀಡಿ ಆಟಗಾರರು, ತರಬೇತುದಾರರು, ತಂಡದ ಮಾಲೀಕರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಾನೆ. ಇದು ಆಟಗಾರರನ್ನು ಫಿಕ್ಸಿಂಗ್‌ನತ್ತ ಸೆಳೆಯುವ ಪ್ರಯತ್ನವೆಂದು ಪರಿಗಣಿಸಲಾಗಿದೆ. ಹೀಗಾಗಿ ತಂಡಗಳು ಜಾಗರೂಕವಾಗಿರಬೇಕು ಎಂದು ಸೂಚಿಸಿದೆ.
ತಂಡ ಉಳಿಯುವ ಹೋಟೆಲ್ ಮತ್ತು ಪಂದ್ಯಗಳ ವೇಳೆಯೂ ಉದ್ಯಮಿ ಕಾಣಿಸಿಕೊಂಡಿದ್ದಾನೆ. ಆಟಗಾರರನ್ನು ಮತ್ತು ಆಟಗಾರರಿಗೆ ಆಪ್ತರಾಗಿರುವವರನ್ನು ತನ್ನ ಖಾಸಗಿ ಪಾರ್ಟಿಗಳಿಗೆ ಆಹ್ವಾನಿಸುತ್ತಿದ್ದಾನೆ. ತಂಡದ ಸದಸ್ಯರಿಗೆ ಮಾತ್ರವಲ್ಲದೆ ಅವರ ಕುಟುಂಬಗಳಿಗೂ ಉಡುಗೊರೆಗಳನ್ನು ನೀಡುವ ಮೂಲಕ ಅವರನ್ನು ಸೆಳೆಯುತ್ತಿದ್ದಾನೆ ಎಂದು ವರದಿಯಾಗಿದೆ. ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಈಗಾಗಲೇ ಭಾರತದ ಅತ್ಯಂತ ಭ್ರಷ್ಟ ಕ್ರಿಕೆಟ್ ಮಂಡಳಿ ಎಂಬ ಆರೋಪಗಳನ್ನು ಎದುರಿಸುತ್ತಿದೆ. ಈ ಆರೋಪದ ಮಧ್ಯೆ ಹೈದರಾಬಾದ್ ಉದ್ಯಮಿ ಫಿಕ್ಸಿಂಗ್‌ಗೆ ಯತ್ನಿಸುತ್ತಿರುವ ಗುಮಾನಿ ವ್ಯಕ್ತವಾಗಿದೆ.
ಈ ಹಿಂದೆ 2013ರ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ 2016 ಮತ್ತು 2017ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಐಪಿಎಲ್ನಿಂದಲೇ ಬ್ಯಾನ್ ಮಾಡಲಾಗಿತ್ತು.