ಇಂದಿನಿಂದ ವಕ್ಪ್‌ ಕಾನೂನು ಹೋರಾಟ : ಸುಪ್ರೀಂ ಕೋರ್ಟಿನಲ್ಲಿ 73 ಅರ್ಜಿಗಳ ವಿಚಾರಣೆ

ನವದೆಹಲಿ: ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ಒಂದೆಡೆ ಬೀದಿ ಹೋರಾಟಗಳು ನಡೆಯುತ್ತಿದ್ದರೆ ಇಂದಿನಿಂದ ಸುಪ್ರೀಂ ಕೋರ್ಟಿನಲ್ಲಿ ಕಾನೂನು ಹೋರಾಟವೂ ಶುರುವಾಗಲಿದೆ. ವಕ್ಫ್‌ ತಿದ್ದುಪಡಿ ಮಸೂದೆಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ 73 ಅರ್ಜಿಗಳ ಗುಚ್ಚವನ್ನು ಸುಪ್ರೀಂ ಕೋರ್ಟ್‌ ಇಂದು ವಿಚಾರಣೆಗೆತ್ತಿಕೊಳ್ಳಲಿದೆ.
ವಕ್ಫ್‌ ಕಾಯಿದೆಗೆ ತಿದ್ದಪಡಿ ಮಾಡುವ ಮೂಲಕ ಮುಸ್ಲಿಮರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ ಮತ್ತು ಅವರ ಆಸ್ತಿಯನ್ನು ಕಬಳಿಸುವ ಹುನ್ನಾರವಿದೆ. ಸಂವಿಧಾನದಲ್ಲಿ ವಕ್ಫ್‌ ಕಾಯಿದೆಗೆ ತಿದ್ದುಪಡಿ ಮಾಡಲು ಅವಕಾಶ ಇಲ್ಲ ಎಂದು ಮಸೂದೆಯನ್ನು ವಿರೋಧಿಸುವವರು ವಾದಿಸುತ್ತಿದ್ದಾರೆ.
ವಕ್ಫ್‌ ಆಸ್ತಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ತಿದ್ದುಪಡಿ ಅನಿವಾರ್ಯವಾಗಿದೆ. ಭಾರಿ ಪ್ರಮಾಣದಲ್ಲಿ ವಕ್ಫ್‌ ಆಸ್ತಿ ದುರುಪಯೋಗವಾಗುತ್ತಿದೆ. ಇದನ್ನು ತಡೆಯಲು ಸಶಕ್ತ ಕಾನೂನು ಬೇಕು ಎನ್ನುವುದು ಕೇಂದ್ರ ಸರಕಾರದ ವಾದ.
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಸಂಜೀವ್‌ ಖನ್ನ, ಜಸ್ಟಿಸ್‌ ಸಂಜಯ್‌ ಕುಮಾರ್‌ ಮತ್ತು ಜಸ್ಟಿಸ್‌ ಕೆ.ವಿ.ಕುಮಾರ್‌ ಅವರನ್ನೊಳಗೊಂಡಿರುವ ತ್ರಿಸದಸ್ಯ ಪೀಠದ ಮುಂದೆ ವಕ್ಫ್‌ ಕಾಯಿದೆಗೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಸಲ್ಲಿಸಲಾಗಿರುವ 73 ಅರ್ಜಿಗಳು ವಿಚಾರಣೆಗೆ ಬರಲಿವೆ. ವಿಶೇಷವೆಂದರೆ 1995ರಲ್ಲಿ ರಚಿಸಿದ ಮೂಲ ವಕ್ಫ್‌ ಕಾಯಿದೆಯನ್ನು ವಿರೋಧಿಸಿ ಹಿಂದುಗಳು ಸಲ್ಲಿಸಿರುವ ಎರಡು ಅರ್ಜಿಗಳು ಕೂಡ ಈ ಅರ್ಜಿಗಳ ಗುಚ್ಚದಲ್ಲಿ ಸೇರಿವೆ.
ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌, ಸಿಪಿಐ, ಜಗಮೋಹನ್‌ ರೆಡ್ಡಿಯ ವೈಎಸ್‌ಆರ್‌ಸಿಪಿ, ಸಮಾಜವಾದಿ ಪಾರ್ಟಿ, ತಮಿಳು ನಟ ವಿಜಯ್‌ ಹುಟ್ಟುಹಾಕಿದ ರಾಜಕೀಯ ಪಕ್ಷ ಟಿವಿಕೆ, ಆರ್‌ಜೆಡಿ, ಜೆಡಿಯು, ಅಸಾದುದ್ದೀನ್‌ ಓವೈಸಿಯ ಎಐಎಂಐಎಂ, ಆಪ್‌, ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ ಸೇರಿದಂತೆ ಎನ್‌ಡಿಎ ಕೂಟದಲ್ಲಿರುವ ಮತ್ತು ಹೊರಗಿರುವ ವಿಪಕ್ಷಗಳೆಲ್ಲ ವಕ್ಫ್‌ ಕಾಯಿದೆ ವಿರೋಧಿಸಿ ದಾವೆ ಹೂಡಿವೆ.
ಇದೇ ವೇಳೆ ಏಳು ರಾಜ್ಯಗಳು ವಕ್ಫ್‌ ತಿದ್ದುಪಡಿ ಕಾಯಿದೆ ಬೆಂಬಲಿಸಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿವೆ. ತಿದ್ದುಪಡಿ ಕಾಯಿದೆ ಸಂವಿಧಾನದ ಚೌಕಟ್ಟಿಗೊಳಪಟ್ಟಿದೆ, ಮುಸ್ಲಿಮರಿಗೆ ತಾರತಮ್ಯ ಮಾಡುವುದಿಲ್ಲ ಮತ್ತು ವಕ್ಫ್‌ ಮಂಡಳಿಗಳ ಆಡಳಿತವನ್ನು ಸಮರ್ಥಗೊಳಿಸುತ್ತದೆ ಎಂದು ಈ ರಾಜ್ಯಗಳು ವಾದಿಸಿವೆ. ಇದೇ ವೇಳೆ ಕೇಂದ್ರ ಸರಕಾರ ನ್ಯಾಯಾಲಯಕ್ಕೆ ಕೇವಿಯಟ್‌ ಅರ್ಜಿ ಸಲ್ಲಿಸಿದೆ. ಯಾವುದೇ ತೀರ್ಪು ನೀಡುವ ಮೊದಲು ಕೇವಿಯಟ್‌ ಅರ್ಜಿಯನ್ನು ನ್ಯಾಯಾಲಯ ವಿಚಾರಣೆಗೊಳಪಡಿಸಬೇಕಾಗುತ್ತದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top