ನ್ಯಾಶನಲ್ ಹೆರಾಲ್ಡ್ ಕೇಸ್‌ನಲ್ಲಿ ಸೋನಿಯಾ, ರಾಹುಲ್‌ಗೆ ಸಂಕಷ್ಟ
ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಕೇಸ್‌ಗೆ ಸಂಬಂಧಿಸಿದಂತೆ ಕಾಂಗ್ರೆಸ್ ರಾಜ್ಯಸಭೆ ಸದಸ್ಯೆ ಸೋನಿಯಾ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಪಕ್ಷದ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ವಿರುದ್ಧ ಜಾರಿ ನಿರ್ದೇಶನಾಲಯ ಮಂಗಳವಾರ ದಿಲ್ಲಿಯ ರೋಸ್ ಅವೆನ್ಯೂ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸುವುದರೊಂದಿಗೆ ಕಾಂಗ್ರೆಸ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ನ್ಯಾಶನಲ್ ಹೆರಾಲ್ಡ್‌ನ ಕೋಟಿಗಟ್ಟಲೆ ಮೊತ್ತದ ಆಸ್ತಿಯನ್ನು ಕಬಳಿಸಲು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್‌ನ ಉನ್ನತ ನಾಯಕರು ಕ್ರಿಮಿನಲ್ ಷಡ್ಯಂತ್ರ ರೂಪಿಸಿದ್ದರು ಎಂಬುದಾಗಿ ಇ.ಡಿ. ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದೆ. ಚಾರ್ಜ್‌ಶೀಟ್‌ನ ಕೆಲವು ಭಾಗಗಳು ಬಹಿರಂಗವಾಗಿದ್ದು, ಅದರಲ್ಲಿ ಈಗ 5,000 ಕೋ. ರೂ. ಮಾರುಕಟ್ಟೆ ಮೌಲ್ಯವಿರುವ ಆಗಿನ ಸುಮಾರು 2,000 ಕೋ. ರೂ. ಮೌಲ್ಯದ ಆಸ್ತಿಯನ್ನು ಕೇವಲ 50 ಲ.ರೂ.ಗೆ ಮೋಸದಿಂದ ವರ್ಗಾಯಿಸಿಕೊಳ್ಳಲಾಗಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ನ್ಯಾಶನಲ್ ಹೆರಾಲ್ಡ್ ಎಂಬ ಕಾಂಗ್ರೆಸ್ ಮುಖವಾಣಿ ಪತ್ರಿಕೆಯ ಪ್ರಕಾಶನ ಸಂಸ್ಥೆಯಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಹೆಸರಿನಲ್ಲಿದ್ದ 2,000 ಕೋ. ರೂ. ಮೌಲ್ಯದ ಆಸ್ತಿಯ ಶೇ.99 ಷೇರುಗಳನ್ನು ಬರೀ 50 ಲ.ರೂ.ಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಒಡೆತನದಲ್ಲಿರುವ ಯಂಗ್ ಇಂಡಿಯನ್ ಎಂಬ ಖಾಸಗಿ ಕಂಪನಿಗೆ ವರ್ಗಾಯಿಸಿಕೊಳ್ಳಲಾಗಿದೆ. ಈ ಮೂಲಕ ಸುಮಾರು 998 ಕೋ.ರೂ. ಲಾಭ ಮಾಡಿಕೊಳ್ಳಲಾಗಿದೆ ಎಂದು ಇ.ಡಿ. ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದೆ. ಕಾಂಗ್ರೆಸ್ ನಾಯಕರಾದ ಸ್ಯಾಮ್ ಪಿಟ್ರೋಡ, ಸುಮನ್ ದುಬೆ ಈ ಪ್ರಕರಣದ ಸದ್ಯ ಬದುಕಿರುವ ಆರೋಪಿಗಳು. ಓಸ್ಕರ್ ಫೆರ್ನಾಂಡಿಸ್ ಮತ್ತು ಮೋತಿಲಾಲ್ ವೋರಾ ತೀರಿಕೊಂಡಿದ್ದಾರೆ. ಯಂಗ್ ಇಂಡಿಯನ್ ಎಂಬುದು ಲಾಭ ರಹಿತ ಸಂಸ್ಥೆ ಎಂದು ಹೇಳಿಕೊಳ್ಳುತ್ತಿದ್ದರೂ ಅದು ಇಷ್ಟರ ತನಕ ಸಮಾಜ ಸೇವೆ ಮಾಡಿದ ಯಾವುದೇ ದಾಖಲೆ ಇಲ್ಲ ಎಂದು ಇ.ಡಿ.ತಿಳಿಸಿದೆ.
ನ್ಯಾಶನಲ್ ಹೆರಾಲ್ಡ್ ಎಂಬುದು ಜವಹರಲಾಲ್ ನೆಹರು ಸ್ಥಾಪಿಸಿದ ಪತ್ರಿಕೆಯಾಗಿದ್ದು, ಇದಕ್ಕೆ ದೇಶದ ಪ್ರಮುಖ ನಗರಗಳಲ್ಲಿ ಕೋಟಿಗಟ್ಟಲೆ ಮೌಲ್ಯದ ಆಸ್ತಿಯಿದೆ. ಚಾರ್ಜ್‌ಶೀಟ್‌ನಲ್ಲಿ ಸೋನಿಯಾ ಗಾಂಧಿಯನ್ನು ನಂಬರ್ 1 ಹಾಗೂ ರಾಹುಲ್ ಗಾಂಧಿಯನ್ನು ನಂಬರ್ 2 ಆರೋಪಿ ಎಂದು ಹೆಸರಿಸಲಾಗಿದೆ. ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪ ಸಾಬೀತಾದರೆ 7 ವರ್ಷ ತನಕ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್?
2014ರಲ್ಲಿ ದಿಲ್ಲಿ ನ್ಯಾಯಾಲಯದಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ದೂರಿನಿಂದ ಹುಟ್ಟಿಕೊಂಡ ಕೇಸಿದು. 2021ರಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣದ ವಿಚಾರಣೆಯನ್ನು ಶುರುಮಾಡಿತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರು ಅಸೋಸಿಯೆಟೆಡ್ ಜರ್ನಲ್ಸ್ ಲಿಮಿಟೆಡ್‌ನ ಸುಮಾರು 2000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಯಂಗ್ ಇಂಡಿಯಾ ಲಿಮಿಟೆಡ್ ಮೂಲಕ ಕೇವಲ 50 ಲಕ್ಷ ರೂಪಾಯಿಗಳಿಗೆ ವಶಪಡಿಸಿಕೊಂಡಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ದೂರು ನೀಡಿದ್ದರು. ಕಾನೂನು ಸವಾಲುಗಳ ಹೊರತಾಗಿಯೂ ದಿಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಈ ಕೇಸ್‌ನ ತನಿಖೆ ಮುಂದುವರಿಸಲು ಅವಕಾಶ ನೀಡಿದೆ.
ಕೋರ್ಟ್ ಸೂಚನೆಯಂತೆ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ ಹಲವು ಸ್ಥಳಗಳಲ್ಲಿ ಶೋಧ ನಡೆಸಿ ಅಕ್ರಮ ನಡೆದಿರುವ ಬಗ್ಗೆ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಭಾರತದ ಮೊದಲ ಪ್ರಧಾನಿ ಮತ್ತು ಕಾಂಗ್ರೆಸ್ ನಾಯಕ ಜವಾಹರಲಾಲ್ ನೆಹರು ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರು 1938ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಸ್ಥಾಪಿಸಿದ್ದರು. ಇದರ ಮಾಲೀಕತ್ವವನ್ನು ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ ಹೊಂದಿತ್ತು. ಸ್ವಾತಂತ್ರ್ಯ ಬಳಿಕ ಅದು ಕಾಂಗ್ರೆಸ್‌ನ ಮುಖವಾಣಿಯಾಗಿ ಬದಲಾಯಿತು. ಸದ್ಯ ಎಜೆಎಲ್, ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿದೆ. ಎಜೆಎಲ್‌ನ ಆಸ್ತಿಯನ್ನು ಕಾಂಗ್ರೆಸ್‌ನ ವಿವಿಧ ನಾಯಕರು ಕಡಿಮೆ ಮೌಲ್ಯಕ್ಕೆ ವಶಪಡಿಸಿಕೊಂಡಿದ್ದರು ಎಂಬ ಆರೋಪ ಇದೆ. ಅದನ್ನೇ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದು, ಈಗ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಚಾರ್ಚ್‌ಶೀಟ್ ಸಲ್ಲಿಸಿದೆ.
ಇದೇ ಮೊದಲ ಬಾರಿಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, ರಾಷ್ಟ್ರ ರಾಜಕಾರಣದಲ್ಲಿ ಭಾರಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ಈ ಮೂಲಕ ಮೊದಲ ಬಾರಿಗೆ ಸೋನಿಯಾ ಗಾಂಧಿಮತ್ತು ರಾಹುಲ್ ಗಾಂಧಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾದಂತಾಗಿದೆ.ಇಡಿ ಚಾರ್ಜ್‌ಶೀಟ್ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಕೇಂದ್ರದ ವಿರುದ್ಧ ಮುಗಿಬಿದ್ದಿದ್ದು, ಇದು ದ್ವೇಷ ರಾಜಕಾರಣ ಎಂದು ಕಿಡಿಕಾರುತ್ತಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಏಪ್ರಿಲ್ 25ರಂದು ವಿಚಾರಣೆ ನಡೆಸಲಿದೆ. ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಏಪ್ರಿಲ್ 9ರಂದು ಸಲ್ಲಿಸಲಾದ ಆರೋಪಪಟ್ಟಿಯನ್ನ ಪರಿಶೀಲನೆ ನಡೆಸಿ, ಏಪ್ರಿಲ್ 25ರಂದು ಪ್ರಕರಣವನ್ನ ಮುಂದಿನ ವಿಚಾರಣೆಗೆ ಮುಂದೂಡಿದ್ದಾರೆ. ಕೆಲದಿನಗಳ ಹಿಂದೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮತ್ತು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ಗೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಪ್ತಿ ಮಾಡಿದ್ದ 661 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನ ವಶಕ್ಕೆ ಪಡೆಯಲು ಇಡಿ ನೋಟಿಸ್ ಜಾರಿ ಮಾಡಿತ್ತು. ಆದ್ರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿರುವುದು ಇದೇ ಮೊದಲು.