ಜಾತಿ ಗಣತಿ ವರದಿಗೆ ಎಲ್ಲೆಡೆಯಿಂದ ವಿರೋಧ : ಅಡಕತ್ತರಿಯಲ್ಲಿ ಸಿಲುಕಿದ ಸರಕಾರ

ಪ್ರಬಲ ಸಮುದಾಯಗಳಿಂದ ಪ್ರತ್ಯೇಕ ಗಣತಿ, ಹೋರಾಟದ ಎಚ್ಚರಿಕೆ

ಬೆಂಗಳೂರು: ಏನೇನೋ ಲೆಕ್ಕಾಚಾರ ಹಾಕಿ ಬಿಡುಗಡೆ ಮಾಡಿದ ಜಾತಿ ಗಣತಿ ವರದಿ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾಲಿಗೆ ಬಿಸಿತುಪ್ಪವಾಗುವ ಲಕ್ಷಣ ಕಾಣಿಸಿದೆ. ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ವರದಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದರೂ ಅದಕ್ಕೂ ಮೊದಲೇ ವರದಿಯ ಕೆಲವು ಅಂಶಗಳು ಬಹಿರಂಗವಾಗಿ ಎಲ್ಲೆಲ್ಲೂ ಆಕ್ರೋಶ ವ್ಯಕ್ತವಾಗುತ್ತದೆ. ಮುಖ್ಯವಾಗಿ ಎರಡು ಪ್ರಬಲ ಸಮುದಾಯಗಳಾದ ಒಕ್ಕಲಿಗರು ಮತ್ತು ಲಿಂಗಾಯತರು ವರದಿ ವಿರುದ್ಧ ಸಿಡಿದು ನಿಂತಿದ್ದಾರೆ. ಇದರ ಜೊತೆಗೆ ಇತರ ಕೆಲವು ವರ್ಗಗಳಿಂದಲೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ಸರಕಾರ ಜಾತಿ ಜೇನುಗೂಡಿಗೆ ಕೈ ಹಾಕಿ ಕಚ್ಚಿಸಿಕೊಂಡಿತೇ ಎಂಬ ಪ್ರಶ್ನೆ ಎದುರಾಗಿದೆ.

ನಿನ್ನೆ ಸಂಜೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮನೆಯಲ್ಲಿ ನಡೆದ ಒಕ್ಕಲಿಗೆ ಶಾಸಕ ಮತ್ತು ಎಂಎಲ್‌ಸಿಗಳ ಸಭೆಯಲ್ಲಿ ವರದಿ ಬಗ್ಗೆ ಆಕ್ಷೇಪ ಎತ್ತಲಾಗಿದೆ. ಬಹುತೇಕ ಶಾಸಕರು ವರದಿ ಜಾರಿಯಾದರೆ ರಾಜಕೀಯವಾಗಿ ದೊಡ್ಡಮಟ್ಟದ ಹಿನ್ನಡೆಯಾಗಲಿದೆ ಎಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಸಂಘಗಳ ಮುಖಂಡರು ಕೂಡ ಬಹಿರಂಗವಾಗಿಯೇ ವರದಿಯನ್ನು ವಿರೋಧಿಸಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಸಮುದಾಯಗಳ ವಿವಿಧ ಸ್ವಾಮೀಜಿಗಳೂ ಜಾತಿ ಗಣತಿ ವರದಿಯಲ್ಲಿ ಲೋಪಗಳಿವೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಹೀಗೆ ಪ್ರಭಾವಿ ಸಮುದಾಯಗಳ ವಿರೋಧಕ್ಕೆ ಈಗ ಸಿಎಂ ಸಿದ್ದರಾಮಯ್ಯ ಗುರಿಯಾಗಿದ್ದಾರೆ. ಪ್ರಬಲ ಒಕ್ಕಲಿಗ ಸಮುದಾಯ ಸರ್ಕಾರದ ವಿರುದ್ಧ ಸಿಡಿದೆದ್ದಿದೆ. ಒಕ್ಕಲಿಗರು ಜಾತಿ ಗಣತಿ ವಿರುದ್ಧ ದಂಗೆ ಏಳುವ ಸೂಚನೆ ಕೊಟ್ಟಿದ್ದಾರೆ. ಒಕ್ಕಲಿಗ ಸಂಘ ಕರ್ನಾಟಕ ಬಂದ್ ರೀತಿಯ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದೆ. ಜಾತಿ ಗಣತಿ ವರದಿ ಜಾರಿಯಾದರೆ ಸರ್ಕಾರ ಪತನವಾಗಲಿದೆ. ಹೊಸದಾಗಿ ಸರ್ವೆ ಮಾಡದಿದ್ದರೆ ನಾವೇ 100 ಕೋಟಿ ರೂ. ಖರ್ಚು ಮಾಡಿ ಜನಗಣತಿ ಮಾಡುತ್ತೇವೆ ಎಂದು ಸಂಘದವರು ಸವಾಲು ಎಸೆದಿದ್ದಾರೆ. ಶೀಘ್ರವೇ ನಿರ್ಮಲಾನಂದ ಸ್ವಾಮೀಜಿ, ನಂಜಾವಧೂತ ಶ್ರೀಗಳ ಜೊತೆ ಚರ್ಚಿಸಿ ಮುಂದಿನ ಹೋರಾಟ ನಡೆಸಲು ತೀರ್ಮಾನಿಸಿದ್ಧಾರೆ.
ಜಾತಿಗಣತಿಯನ್ನು ವಿರೋಧಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಇದೇನೂ ಜಾತಿಗಣತಿಯೋ, ದ್ವೇಷಗಣತಿಯೋ? ದರ ಏರಿಕೆ, ಭ್ರಷ್ಟಾಚಾರ ಮುಜುಗರದಿಂದ ಮುಖ ಮುಚ್ಚಿಕೊಳ್ಳೋಕೆ ರೂಪಿಸಿದ ಸಂಚಿದು ಅಂತ ಕಿಡಿಕಾರಿದ್ದಾರೆ.































 
 

ಇತ್ತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ, ನಾವು ಲಿಂಗಾಯತರದ್ದೇ ಪ್ರತ್ಯೇಕ ಜಾತಿ ಗಣತಿ ಮಾಡಿಸುತ್ತೇವೆ ಎಂದಿದ್ದಾರೆ. ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಕೆಂಚಪ್ಪಗೌಡ, ನಾವೂ ಸಹ ನಮ್ಮ ಒಕ್ಕಲಿಗ ಸಮುದಾಯದ ಪ್ರತ್ಯೇಕ ಸಮೀಕ್ಷೆ ಮಾಡಿಸುತ್ತೇವೆ ಎಂದಿದ್ದಾರೆ. ಜೊತೆಗೆ ತಮ್ಮ ಹೋರಾಟಕ್ಕೆ ಸಚಿವರು, ಶಾಸಕರು ಸಾಥ್ ನೀಡಬೇಕೆಂದು ಕೋರಿದ್ದಾರೆ.

ಇನ್ನೊಂದೆಡೆ ಪ್ರಬಲ ಜಾತಿಯವರ ಒತ್ತಡಕ್ಕೆ ಮಣಿಯದೆ ಜಾತಿ ಗಣತಿ ವರದಿ ಜಾರಿಮಾಡಲೇ ಬೇಕು ಎಂದು ಈಡಿಗ ಸಮಾಜದ ಪ್ರಣವಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ. ವಿಜಯಪುರದಲ್ಲಿ ಅಹಿಂದ ಮುಖಂಡರು ಜಾತಿ ಗಣತಿ ವರದಿ ಜಾರಿ ಆಗದೆ ಇದ್ದರೆ ಹೋರಾಟ ಮಾಡುತ್ತೇವೆ ಎಂದು ಗುಡುಗಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಜಾತಿ ಗಣತಿಗೆ ಗೊಲ್ಲ, ಯಾದವ ಸಮುದಾಯದವರೂ ವಿರೋಧ ವ್ಯಕ್ತಪಡಿಸಿದ್ದಾರೆ. ಗೊಲ್ಲ ಸಮುದಾಯದ ಸಂಖ್ಯೆ 30 ಲಕ್ಷಕಿಂತ ಹೆಚ್ಚು ಇದೆ. ಗೊಲ್ಲರು ಅತಿ ಹಿಂದುಳಿದ ವರ್ಗದಲ್ಲಿದ್ದಾರೆ. ಜಾತಿ ಗಣತಿ ವರದಿಯಲ್ಲಿ ಯಾದವರನ್ನು ಪ್ರವರ್ಗ-1ಬಿ ಗೆ ಸೇರಿಸಲಾಗಿದೆ. ಗೊಲ್ಲ ಮತ್ತು ಯಾದವರನ್ನು ಬೇರ್ಪಡಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top