ಕಾಸರಗೋಡು : ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಎದುರಿನ ಅಂಗಡಿಯವ ಸಾರ್ವಜನಿಕರೆದುರೇ ಬೆಂಕಿ ಹಚ್ಚಿದ ಪರಿಣಾಮ ಗಂಭೀರವಾದ ಸುಟ್ಟ ಗಾಯಗಳಾಗಿದ್ದ ಅಂಗಡಿ ಮಾಲಕಿ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕುಂಬಳೆ ಸಮೀಪದ ಬೇಡಡ್ಕ ನಿವಾಸಿ ರಮಿತಾ (32) ಕೊಲೆಯಾಗಿರುವ ಮಹಿಳೆ. ತಮಿಳುನಾಡು ಮೂಲದ ರಾಮಾಮೃತಂ (57) ಎಂಬಾತ ಬೆಂಕಿ ಹಚ್ಚಿದ ಆರೋಪಿ. ರಮಿತಾ ಬೇಡಡ್ಕದ ಮನ್ನಡ್ಕ ಎಂಬಲ್ಲಿ ಸಣ್ಣ ಕಿರಾಣಿ ಅಂಗಡಿಯೊಂದನ್ನು ನಡೆಸುತ್ತಿದ್ದರು. ಅವರ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಆರೋಪಿ ರಾಮಾಮೃತಂ ಮಹಿಳೆಯ ಅಂಗಡಿಯ ಎದುರೇ ಪೀಠೋಪಕರಣ ಅಂಗಡಿ ಹೊಂದಿದ್ದ. ಮೂಲತಃ ತಮಿಳುನಾಡಿನವನಾದ ಈತ ಕಳೆದ ಸುಮಾರು 25 ವರ್ಷಗಳಿಂದ ಬೇಡಡ್ಕ ಪರಿಸರದಲ್ಲಿ ವಾಸವಾಗಿದ್ದ.
ಆರ ತಿಂಗಳ ಹಿಂದೆಯಷ್ಟೇ ಈತ ಮಹಿಳೆಯ ಅಂಗಡಿ ಎದುರು ಇದ್ದ ಕೋಣೆಯನ್ನು ಬಾಡಿಗೆಗೆ ಪಡೆದು ಪೀಠೋಪಕರಣ ವ್ಯಾಪಾರ ಶುರು ಮಾಡಿದ್ದ. ನಿತ್ಯ ಅಸಭ್ಯ ವರ್ತನೆ, ದುರುಗುಟ್ಟಿ ನೋಡುತ್ತಾ ಮಹಿಳೆಗೆ ಕಿರುಕುಳ ನೀಡುತ್ತಿದ್ದ. ಈ ಕುರಿತು ಎರಡು ವಾರದ ಹಿಂದೆ ರಮಿತಾ ಬೇಡಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದ್ವೇಷದಲ್ಲಿ ಎ.8 ರಂದು ಸಂಜೆ 3 ಗಂಟೆಗೆ ಅಂಗಡಿಯೊಳಗೆ ನುಗ್ಗಿದ ಆರೋಪಿ ಮಹಿಳೆ ಮೇಲೆ ಟಿನ್ನರ್ ಎಂಬ ದ್ರಾವಣ ಸುರಿದು ಬೆಂಕಿ ಹಚ್ಚಿದ್ದ. ಮಹಿಳೆ ಹೊತ್ತಿ ಉರಿಯುತ್ತಿರುವಾಗಲೇ ಅಲ್ಲಿಂದ ಬಸ್ ಏರಿ ಪಲಾಯನ ಮಾಡಲೆತ್ನಿಸಿದ್ದ ಆರೋಪಿಯನ್ನು ನಾಗರಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದರು. ತೀವ್ರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮಹಿಳೆ ಸೋಮವಾರ ತಡರಾತ್ರಿ ಮೃತಪಟ್ಟಿದ್ದಾರೆ.