ತರಕಾರಿ, ಹಣ್ಣುಹಂಪಲು ಸಹಿತ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ
ಬೆಂಗಳೂರು: ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಲಾರಿ ಮಾಲೀಕರ ಮುಷ್ಕರ ಸೋಮವಾರ ಮಧ್ಯರಾತ್ರಿಯಿಂದ ಶುರುವಾಗಿದೆ. ಮಂಗಳವಾರ ಬೆಳಗ್ಗೆ ಲಾರಿಗಳು ರೋಡಿಗೆ ಇಳಿದಿಲ್ಲ. ಇದರಿಂದಾಗಿ ಅಗತ್ಯ ವಸ್ತುಗಳ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಡಿಸೆಲ್ ದರ ಏರಿಕೆ, ಟೋಲ್ ಶುಲ್ಕ ಹೆಚ್ಚಳ, ಆರ್‌ಟಿಒ ಅಧಿಕಾರಿಗಳ ಕಿರುಕುಳ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಲಾರಿ ಮಾಲೀಕರ ಸಂಘ ಮುಷ್ಕರಕ್ಕೆ ಕರೆ ನೀಡಿದೆ. 6 ಲಕ್ಷಕ್ಕೂ ಹೆಚ್ಚು ಲಾರಿಗಳು ಇಂದು ಸೇವೆ ಬಂದ್ ಮಾಡಲಿವೆ. ಇದರಿಂದ ಹಲವು ಸೇವೆಗಳಿಗೆ ಬಿಸಿ ತಟ್ಟಲಿದೆ. 6 ತಿಂಗಳಲ್ಲಿ ಸರ್ಕಾರ 2 ಬಾರಿ ಡೀಸೆಲ್ ದರ ಹೆಚ್ಚಿಸಿದೆ. ಡೀಸೆಲ್ ದರ ಇಳಿಸಬೇಕು ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಲಾರಿ ಮಾಲೀಕರು ಏಪ್ರಿಲ್ 14ರ ಗಡುವು ಕೊಟ್ಟಿದ್ದರು. ಆದರೆ ಸರ್ಕಾರ ಇದಕ್ಕೆ ಸ್ಪಂದಿಸಿರಲಿಲ್ಲ.
ಮುಷ್ಕರದ ಪರಿಣಾಮವಾಗಿ ಅನೇಕ ಸೇವೆಗಳಲ್ಲಿ ವ್ಯತ್ಯಯ ಆಗಲಿದೆ. ಜಲ್ಲಿಕಲ್ಲು, ಮರಳು ಲಾರಿಗಳು, ಗೂಡ್ಸ್ ವಾಹನಗಳು, ಅಕ್ಕಿ ಸಾಗಿಸುವ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದೆ. ಜೊತೆಗೆ ಪೆಟ್ರೋಲ್, ಡೀಸೆಲ್ ಸಾಗಿಸುವ ಲಾರಿಗಳೂ ಬಂದ್ ಸಂಚಾರ ನಿಲ್ಲಿಸಲಿವೆ.
ಡೀಸೆಲ್ ದರ ಇಳಿಕೆ ಮಾಡಬೇಕು, ಟೋಲ್ ಸಂಗ್ರಹ ಕೈ ಬಿಡಬೇಕು, ಆರ್‌ಟಿಒ ಬಾರ್ಡರ್ ಚೆಕ್ ಪೋಸ್ಟ್ ತೆಗೆಯಬೇಕು,ಎಫ್‌ಸಿ ಶುಲ್ಕ ಕಡಿಮೆ ಮಾಡಬೇಕು, ಸರಕು ಸಾಗಣೆ ವಾಹನ ನಿರ್ಬಂಧ ಹಿಂಪಡೆಯಬೇಕು ಎನ್ನುವುದು ಲಾರಿ ಮಾಲೀಕರ ಪ್ರಮುಖ ಬೇಡಿಕೆಗಳಾಗಿವೆ.
ಲಾರಿ ಮುಷ್ಕರದಿಂದಾಗಿ ತರಕಾರಿ, ಹಣ್ಣುಗಳ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಟೂರಿಸ್ಟ್ ಟ್ಯಾಕ್ಸಿ ಸಂಚಾರದಲ್ಲಿ ವ್ಯತ್ಯಯವಾಗಬಹುದು. ಜಲ್ಲಿಕಲ್ಲು, ಮರಳು ಪೂರೈಕೆ ವ್ಯತ್ಯಯವಾದರೆ ನಿರ್ಮಾಣ ಕಾಮಗಾರಿಗಳ ಮೇಲೆ ಪರಿಣಾಮವಾಗಬಹುದು. ಡಿಪೋಗಳಿಗೆ ಪಡಿತರ ಆಹಾರ ಧಾನ್ಯಗಳ ಪೂರೈಕೆಯಾಗದಿದ್ದರೆ ಪಡಿತರ ವಿತರಣೆಗೆ ಸಮಸ್ಯೆಯಾಗಬಹುದು. ಎಲ್‌ಪಿಜಿ ಸಿಲಿಂಡರ್ ಪೂರೈಕೆ ಮತ್ತು ಪೆಟ್ರೋಲ್, ಡೀಸೆಲ್ ಪೂರೈಕೆಯೂ ವ್ಯತ್ಯಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಹಾಲು, ಔಷಧ, ಗೃಹ ಬಳಕೆ ಅಡುಗೆ ಅನಿಲ, ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನದಂಥ ತುರ್ತು ಸೇವೆಗಳಿಗೆ ಮುಷ್ಕರದಿಂದ ವಿನಾಯಿತಿ ನೀಡಲಾಗಿದೆ.