ಬೆಂಗಳೂರು: ಜಾತಿ ಗಣತಿ ವರದಿಗೆ ಕಾಂಗ್ರೆಸ್‌ನಲ್ಲೇ ತೀವ್ರ ವಿರೋಧ ವ್ಯಕ್ತವಾಗಿದ್ದು, ವರದಿ ಅವೈಜ್ಞಾನಿಕವಾಗಿದೆ ಎಂದು ಹಲವು ನಾಯಕರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈ ನಡುವೆ ರಾಜ್ಯದ ಎರಡು ಪ್ರಮುಖ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯತ ಜಾತಿಯ ಮುಖಂಡರು ಕೂಡ ವರದಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಒಕ್ಕಲಿಗ ಶಾಸಕರು ಮತ್ತು ಎಂಎಲ್‌ಸಿಗಳ ಸಭೆ ಕರೆದಿದ್ದಾರೆ. ಡಿಕೆಶಿ ಮನೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಯಾವ ನಿರ್ಣಯ ಕೈಗೊಳ್ಳಲಾಗುತ್ತದೆ ಎಂಬುದರ ಮೇಲೆ ವರದಿಯ ಭವಿಷ್ಯ ನಿಂತಿರುವುದರಿಂದ ಈ ಸಭೆ ಬಹಳ ಕುತೂಹಲ ಕೆರಳಿಸಿದೆ.
ಸಂಜೆ 6 ಗಂಟೆಗೆ ಡಿಕೆಶಿಯವರ ಸರ್ಕಾರಿ ನಿವಾಸದಲ್ಲಿ ಒಕ್ಕಲಿಗ ಜನಪ್ರತಿನಿಧಿಗಳ ಸಭೆ ನಡೆಯಲಿದೆ. ಈ ಸಭೆಗೆ ಒಕ್ಕಲಿಗ ಸಚಿವರು, ಶಾಸಕರು, ಎಂಎಲ್‌ಸಿಗಳಿಗೆ ಆಹ್ವಾನ ನೀಡಲಾಗಿದೆ.
ಜಾತಿ ಗಣತಿ ಸಂಬಂಧ ಏ.17ರಂದು ಸಿಎಂ ಸಿದ್ದರಾಮಯ್ಯ ವಿಶೇಷ ಕ್ಯಾಬಿನೆಟ್ ಸಭೆಯನ್ನು ಕರೆದಿದ್ದಾರೆ. ಈ ಸಭೆಗೂ ಮುನ್ನ ಒಕ್ಕಲಿಗ ನಾಯಕರ ನಿಲುವು ಏನಿರಬೇಕೆಂದು ಡಿಕೆಶಿ ಅಭಿಪ್ರಾಯ ಸಂಗ್ರಹ ಮಾಡಲು ಈ ಸಭೆಯನ್ನು ಕರೆದಿದ್ದಾರೆ.
ಜಾತಿ ಗಣತಿ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಇನ್ನೂ ನಾನು ವರದಿಯನ್ನೇ ಓದಿಲ್ಲ. ಶಾಸಕರ ಜೊತೆ ಚರ್ಚಿಸಿದ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗುವುದು. ನಮ್ಮ ಸಮುದಾಯದ ನಾಯಕರ ಮನಸ್ಸಿನಲ್ಲಿರುವ ವಿಚಾರವನ್ನು ತಿಳಿದುಕೊಳ್ಳಲು ಸಭೆ ಕರೆದಿದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ.
ಗುರುವಾರ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಯ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಒಕ್ಕಲಿಗ ಸಮುದಾಯದ ಶಾಸಕರು ಮತ್ತು ಸಚಿವರ ನಿಲುವು ಏನಿರಬೇಕೆಂದು ಚರ್ಚಿಸಲು ಡಿಕೆಶಿ ಪ್ರತ್ಯೇಕ ಸಭೆ ಕರೆದಿದ್ದಾರೆ ಎನ್ನಲಾಗಿದೆ.
ಜಾತಿ ಗಣತಿ ವರದಿ : ಇಂದು ಡಿಕೆಶಿ ನೇತೃತ್ವದಲ್ಲಿ ಒಕ್ಕಲಿಗ ಶಾಸಕರ ಸಭೆ
