ಆರು ತಿಂಗಳ ಹಿಂದೆ ಆದ ಜಗಳದ ಸೇಡು ತೀರಿಸಿಕೊಳ್ಳಲು ಕೊಲೆ
ಮಂಗಳೂರು: ಮೂಲ್ಕಿಯ ಆಟೋರಿಕ್ಷಾ ಚಾಲಕ ಮುಹಮ್ಮದ್ ಶರೀಫ್ (52) ಕೊಲೆಗೆ ಪೂರ್ವ ದ್ವೇಷವೇ ಕಾರಣ ಎಂಬ ವಿಚಾರ ಆರೋಪಿಯ ವಿಚಾರಣೆಯಿಂದ ತಿಳಿದುಬಂದಿದೆ. ಮಂಗಳೂರಿನಲ್ಲಿ ರಿಕ್ಷಾ ಬಾಡಿಗೆ ಮಾಡುತ್ತಿದ್ದ ಮೂಲ್ಕಿಯ ಮುಹಮ್ಮದ್ ಶರೀಫ್ ಅವರನ್ನು ಕೇರಳ ಗಡಿಯ ಮಂಜೇಶ್ವರ ಸಮೀಪದ ಕುಂಜತ್ತೂರು ಪದವು ಎಂಬಲ್ಲಿಗೆ ಕೊಂಡೊಯ್ದು ಕೊಲೆ ಮಾಡಿ ಶವವನ್ನು ಬಾವಿಗೆ ಎಸೆದಿದ್ದ ಆರೋಪಿ ಅಭಿಷೇಕ್ ಶೆಟ್ಟಿ ಎಂಬಾತನನ್ನು ಮಂಗಳೂರು ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ಆರೋಪಿ ಅಭಿಷೇಕ್ ಶೆಟ್ಟಿ (40) ಸುರತ್ಕಲ್‌ನ ನಿವಾಸಿ. ತಾನು ಓರ್ವನೇ ಈ ಕೃತ್ಯ ಎಸಗಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ಕ್ಯಾಮರಾ ಹಾಗೂ ಇನ್ನಿತರ ಮಾಹಿತಿ ಆಧಾರದಲ್ಲಿ ಆರೋಪಿಯ ಸುಳಿವು ಲಭಿಸಿದ್ದು, ಬೈಕಂಪಾಡಿಯಿಂದ ಈತನನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾದಕ ವಸ್ತು ಸೇವನೆಯ ಮತ್ತಿನಲ್ಲಿ ಶರೀಫ್‌ರನ್ನು ಕೊಲೆಗೈದಿದ್ದು, ಈತನ ವಿರುದ್ಧ ಗಾಂಜಾ ಸೇರಿದಂತೆ ಮಾದಕ ವಸ್ತು ಸೇವನೆ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ.
ಮಂಗಳೂರಿನ ಶಾಲೆಯೊಂದರ ಬಸ್ಸಿನ ಚಾಲಕನಾಗಿದ್ದ ಅಭಿಷೇಕ್ ಶೆಟ್ಟಿ ಮತ್ತು ಶರೀಫ್ ನಡುವೆ ಆರು ತಿಂಗಳ ಹಿಂದೆ ಸೈಡ್ ನೀಡುವ ವಿಚಾರಕ್ಕೆ ಜಗಳವಾಗಿತ್ತು. ಅಂದಿನಿಂದ ಶರೀಫ್ ಮೇಲೆ ಅಭಿಷೇಕ್ ದ್ವೇಷ ಬೆಳೆಸಿಕೊಂಡಿದ್ದ. ಈ ನಡುವೆ ಬಸ್ ಚಾಲಕ ವೃತ್ತಿಯಿಂದ ಅಭಿಷೇಕ್‌ನನ್ನು ಶಾಲಾ ಆಡಳಿತ ಮಂಡಳಿ ವಜಾಗೊಳಿಸಿತ್ತು. ಇದಕ್ಕೆ ಕೂಡ ಶರೀಫ್ ಕಾರಣ ಎಂದು ಅಭಿಷೇಕ್ ಭಾವಿಸಿ ಪ್ರತಿಕಾರ ತೀರಿಸಲು ಸಮಯ ಕಾಯುತ್ತಿದ್ದ. ಏಪ್ರಿಲ್ 9ರಂದು ರಾತ್ರಿ ಆಟೋರಿಕ್ಷಾ ಬಾಡಿಗೆಗೆಂದು ಮಂಜೇಶ್ವರಕ್ಕೆ ಕರೆದುಕೊಂಡು ಹೋಗಿ ನಿರ್ಜನ ಪ್ರದೇಶಕ್ಕೆ ತಲಪುತ್ತಿದಂತೆ ಚಾಕುವಿನಿಂದ ಇರಿದು ಕೊಲೆಗೈದ ಬಳಿಕ ಬಾವಿಗೆಸೆದು ಸ್ವಲ್ಪ ಮುಂದೆ ರಸ್ತೆಗೆ ಬಂದು ಆ ದಾರಿಯಾಗಿ ಬಂದ ಸ್ಕೂಟರ್ ಹತ್ತಿ ತಲಪಾಡಿಯ ಸಂಬಂಧಿಕರ ಮನೆಯಲ್ಲಿ ವಾಸ್ತ್ಯವ್ಯ ಹೂಡಿದ್ದಾಗಿ ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಅಭಿಷೇಕ್ ಶೆಟ್ಟಿ ಬಸ್ ಚಾಲಕನಾಗಿದ್ದಾಗ ಉದ್ದಕ್ಕೆ ಕೂದಲು ಬೆಳೆಸಿಕೊಂಡಿದ್ದ. ಆದರೆ ಏಪ್ರಿಲ್ 9ರಂದು ಆಟೋರಿಕ್ಷಾಕ್ಕೆ ಹತ್ತಿದಾಗ ಈತನ ಹೇರ್‌ಸ್ಟೈಲ್ ಬದಲಾಗಿದ್ದರಿಂದ ಶರೀಫ್‌ಗೆ ಗುರುತು ಪತ್ತೆಯಾಗಿರಲಿಲ್ಲ. ರಾತ್ರಿ ಆದುದರಿಂದ ಅಭಿಷೇಕ್‌ನ ಮುಖವನ್ನು ಸರಿಯಾಗಿ ನೋಡಲು ಸಾಧ್ಯವಾಗಿರಲಿಲ್ಲ.
ಅಭಿಷೇಕ್‌ಗೆ ಕುಂಜತ್ತೂರು ಪದವು ಸ್ಥಳದ ಬಗ್ಗೆ ಪರಿಚಯ ಇತ್ತು. ಹಲವು ಬಾರಿ ಈತ ಈ ಸ್ಥಳಕ್ಕೆ ಮಾದಕ ವಸ್ತುಗಳ ವಹಿವಾಟಿಗಾಗಿ ಅಲ್ಲಿಗೆ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.