ತರಕಾರಿ, ಗ್ಯಾಸ್ ಸೇರಿ ಅಗತ್ಯ ವಸ್ತುಗಳ ಪೂರೈಕೆ ವ್ಯತ್ಯಯವಾಗುವ ಸಾಧ್ಯತೆ
ಬೆಂಗಳೂರು: ಡೀಸೆಲ್ ದರ ಏರಿಕೆ ಪ್ರತಿಭಟಿಸಿ ಏಪ್ರಿಲ್ 14ರ ಮಧ್ಯರಾತ್ರಿಯಿಂದಲೇ ಲಾರಿ ಮಾಲೀಕರ ಸಂಘ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದ ರಾಜ್ಯಾದ್ಯಂತ ಸುಮಾರು 6 ಲಕ್ಷ ಲಾರಿಗಳ ಸಂಚಾರ ಬಂದ್ ಆಗಲಿದ್ದು, ರಾಜ್ಯಕ್ಕೆ ಬರುವ ಮತ್ತು ಹೊರರಾಜ್ಯಗಳಿಗೆ ಹೋಗುವ ಸರಕು ಸಾಗಾಟದಲ್ಲಿ ವ್ಯತ್ಯಯವಾಗಿ ಜನರಿಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ.
ಆಲ್ ಇಂಡಿಯಾ ಮೋಟರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ದೆಹಲಿ, ಸೌಥ್ ಇಂಡಿಯಾ ಮೋಟರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್, ಕರ್ನಾಟಕ ಗೂಡ್ಸ್ ವೆಹಿಕಲ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್, ಏರ್‌ಪೋರ್ಟ್ ಟ್ಯಾಕ್ಸಿ ಅಸೋಸಿಯೇಷನ್, ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಅಸೋಸಿಯೇಷನ್, ಜಲ್ಲಿಕಲ್ಲು, ಮರಳು ಲಾರಿ ಅಸೋಸಿಯೇಷನ್, ರಾಜ್ಯ ಪಡಿತರ ಆಹಾರ ಧಾನ್ಯಗಳ ಸಾಗಾಣಿಕೆದಾರರ ಸಂಘ, ಗ್ಯಾಸ್ ಟ್ಯಾಂಕ್ ಮಾಲೀಕರ ಸಂಘ ಸಹಿತ 69 ಸಂಘಟನೆಗಳು ಮುಷ್ಕರ ಬೆಂಬಲಿಸಿವೆ. ರಾಜ್ಯದಲ್ಲಿ ಸುಮಾರು 700 ಗೂಡ್ಸ್ ಕಚೇರಿಗಳಿದ್ದು, ಬಂದ್ ಆಗಲಿವೆ. ಏಪ್ರಿಲ್ 15ರಂದು ಒಂದು ದಿನ ಏರ್‌ಪೋರ್ಟ್ ಟ್ಯಾಕ್ಸಿಯನ್ನು ರಸ್ತೆಗಿಳಿಸದಿರಲು ಏರ್‌ಪೋರ್ಟ್ ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ನಿರ್ಧರಿಸಿದೆ. ಆದರೆ ಅನಿರ್ಧಿಷ್ಟಾವಧಿ ಮುಷ್ಕರದ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಿದ್ದಾರೆ.
ಡೀಸೆಲ್ ದರವನ್ನು 2024ರ ಜೂನ್‌ನಲ್ಲಿ 3 ರೂ. ಏರಿಕೆ ಮಾಡಿದ್ದ ರಾಜ್ಯ ಸರ್ಕಾರ ಈಗ ಮತ್ತೆ 2 ರೂ. ಹೆಚ್ಚಳ ಮಾಡಿದೆ. ಈ ಏರಿಕೆ ಕೈಬಿಡುವವರೆಗೆ ಮುಷ್ಕರ ಕೈಬಿಡುವುದಿಲ್ಲ ಎಂದು ಸಂಘಟನೆಗಳು ಸ್ಪಷ್ಟಪಡಿಸಿವೆ. ರಾಜ್ಯದ 18 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸಲಾಗುತ್ತಿದೆ. ಬೇರೆ ಯಾವ ರಾಜ್ಯದಲ್ಲಿಯೂ ರಾಜ್ಯ ಹೆದ್ದಾರಿಗೆ ಟೋಲ್ ಇಲ್ಲ. ರಾಜ್ಯದಲ್ಲಿ ಟೋಲ್ ಸಂಗ್ರಹ ಕೈಬಿಡಬೇಕು. ಗಡಿ ಚೆಕ್‌ಪೋಸ್ಟ್‌ಗಳನ್ನು ರದ್ದುಮಾಡಬೇಕು. ವಾಹನಗಳ ಸಾಮರ್ಥ್ಯ ಅರ್ಹತಾ ಪತ್ರ (ಫಿಟ್‌ನೆಸ್ ಸರ್ಟಿಫಿಕೆಟ್) ನವೀಕರಣಕ್ಕೆ ಶುಲ್ಕವನ್ನು ಹೆಚ್ಚು ಮಾಡಿ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಅದನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ಸರಕು ಸಾಗಣೆ ವಾಹನಗಳ ಪ್ರವೇಶವನ್ನು ನಿಷೇಧಿಸಿರುವುದು, ಕೇವಲ 5 ಗಂಟೆ ಅವಕಾಶ ನೀಡಿರುವುದನ್ನು ತೆಗೆದುಹಾಕಬೇಕು ಎಂಬುದು ಲಾರಿ ಮಾಲೀಕರ ಇತರ ಪ್ರಮುಖ ಬೇಡಿಕೆಗಳಾಗಿವೆ.
ಮುಷ್ಕರದಿಂದಾಗಿ ತರಕಾರಿ, ಹಣ್ಣುಗಳ ಪೂರೈಕೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ. ಡಿಪೋಗಳಿಗೆ ಪಡಿತರ ಆಹಾರ ಧಾನ್ಯಗಳ ಪೂರೈಕೆ, ಎಲ್‌ಪಿಜಿ ಸಿಲಿಂಡರ್ ಸರಬರಾಜು ಹಾಗೂ ಕೆಲ ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಲಾರಿ ಮಾಲೀಕರು ತಿಳಿಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಬಹುತೇಕ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದ್ದು, ಡೀಸೆಲ್ ಬೆಲೆ ಹೆಚ್ಚಳ ಹಾಗೂ ಲಾರಿ ಮುಷ್ಕರ ಮತ್ತಷ್ಟು ಸಮಸ್ಯೆ ತಂದೊಡ್ಡಲಿದೆ. ಪೆಟ್ರೋಲ್, ಡೀಸೆಲ್ ಪೂರೈಕೆ ಲಾರಿಗಳೂ ಮುಷ್ಕರದಲ್ಲಿ ಭಾಗಿಯಾಗುವುದರಿಂದ ಇಂಧನ ಪೂರೈಕೆ ಮೇಲೆ ಬಿಸಿ ತಟ್ಟಲಿದೆ.