ಮುಂದಿನ ತಿಂಗಳೇ ಹಸೆಮಣೆಯೇರಲಿದ್ದಾರೆ ಹುಬ್ಬಳ್ಳಿಯ ಈ ದಿಟ್ಟ ಮಹಿಳಾ ಪೊಲೀಸ್ ಅಧಿಕಾರಿ
ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕತ್ತುಹಿಚುಕಿ ಕೊಲೆ ಮಾಡಿದ್ದ ಆರೋಪಿಯನ್ನು ಗುಂಡಿಕ್ಕಿ ಸಾಯಿಸಿದ ಮಹಿಳಾ ಇನ್‌ಸ್ಪೆಕ್ಟರ್ ಅನ್ನಪೂರ್ಣ ರಾತ್ರಿ ಬೆಳಗಾಗುವುದರೊಳಗೆ ದೇಶಾದ್ಯಂತ ಮನೆ ಮಾತಾಗಿ ಲೇಡಿ ಸಿಂಗಂ ಎಂದು ಕರೆಸಿಕೊಂಡಿದ್ದಾರೆ. ವಾಟ್ಸಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಅನ್ನಪೂರ್ಣ ಕುರಿತು ಪುಂಖಾನುಪುಂಖವಾಗಿ ಪೋಸ್ಟ್‌ಗಳು ಹರಿದಾಡುತ್ತಿವೆ. ಮಹಿಳೆಯಾಗಿ ಅನ್ನಪೂರ್ಣ ತೋರಿಸಿದ ದಿಟ್ಟತನಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಾಕಷ್ಟು ಮಂದಿ ಅನ್ನಪೂರ್ಣ ಮಾಡಿದ ಕ್ರಮ ಸರಿ ಎಂದು ಅವರ ಬೆಂಬಲಕ್ಕೆ ನಿಂತಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕು ಗುಜನಟ್ಟಿ ಗ್ರಾಮದ ನಿವಾಸಿಯಾಗಿರುವ ಅನ್ನಪೂರ್ಣ ಕಡುಬಡತನದ ರೈತಾಪಿ ಕುಟುಂಬದಿಂದ ಬಂದವರು. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂಎಸ್‌ಸಿ ಪದವಿ ಮುಗಿಸಿ ಕಳೆದ ವರ್ಷ ಯುಪಿಎಸ್‌ಸಿ ಪರೀಕ್ಷೆ ಬರೆದು ಪ್ರೀಲಿಮ್ಸ್ ಕ್ಲಿಯರ್ ಮಾಡಿದ್ದರು. ಪಿಎಸ್‌ಐ ಆಗಿ ಆಯ್ಕೆಯಾಗಿ 2018ರಲ್ಲಿ ಸೇವೆಗೆ ಸೇರ್ಪಡೆಯಾಗಿದ್ದರು. ಮೂಲತಃ ಚನ್ನಮ್ಮನ ನೆಲದವರಾಗಿರುವ ಅನ್ನಪೂರ್ಣ ಅವರಿಗೆ ಶೌರ್ಯ ಎನ್ನುವುದು ರಕ್ತದಲ್ಲಿಯೇ ಬಂದಿದೆ. ಮುಂದಿನ ತಿಂಗಳು ಅವರ ಮದುವೆ ನಿಗದಿಯಾಗಿದೆ.

ಕೊಲೆಯಾದ ಬಾಲಕಿಯ ಮುಖ್ವನ್ನು ನೋಡಿ ಪಿಎಸ್‌ಐ ಅನ್ನಪೂರ್ಣ ಆಸ್ಪತ್ರೆಯಲ್ಲಿಯೇ ಕಣ್ಣೀರು ಹಾಕಿದ್ದರು. ಬಂಧಿಸಲು ಹೋದಾಗ ಆರೋಪಿ ದಾಳಿಗೆ ಯತ್ನಿಸಿದ್ದು, ಆತ್ಮರಕ್ಷಣೆಗಾಗಿ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ಸೂಚಿಸಿದರು. ಆದರೆ ಆತ ಲೆಕ್ಕಿಸದೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಹೋದಾಗ ಕಾಲಿನತ್ತ ಗುಂಡು ಹಾರಿಸಿದರು. ಆದರೆ ಗುಂಡು ಬೆನ್ನಿಗೆ ತಾಗಿ ಗಾಯಗೊಂಡ ಆರೋಪಿಯನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದ. ಪಿಎಸ್‌ಐ ಅನ್ನಪೂರ್ಣ ಅವರ ಈ ಕ್ರಮಕ್ಕೆ ಅಭಿನಂದನೆಯ ಮಹಾಪೂರ ಹರಿದುಬರುತ್ತಿದ್ದು, ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿತ್ತು. ಬಿಹಾರ ಮೂಲದ ಆರೋಪಿ ಬಾಲಕಿಯನ್ನು ಶೆಡ್‌ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದನು. ಬಾಲಕಿ ಚೀರಾಟ ಕೇಳಿ ಅಲ್ಲೇ ಇದ್ದ ಸ್ಥಳೀಯರು ಶೆಡ್‌ನತ್ತ ಬಂದಿದ್ದರು. ಜನ ಬರುತ್ತಿರುವುದನ್ನು ಕಂಡ ಆತ ಭಯದಿಂದ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿ, ಎಸ್ಕೇಪ್ ಆಗಿದ್ದ. ಜನರು ಪ್ರತಿಭಟನೆ ಶುರು ಮಾಡಿದಾಗ ಕ್ಷಿಪ್ರವಾಗಿ ತನಿಖೆ ಮಾಡಿದ ಪೊಲೀಸರು ರಾತ್ರಿಯೇ ಆರೋಪಿಯ ಜಾಡು ಪತ್ತೆಹಚ್ಚಿ ಅವನನ್ನು ಬಂಧಿಸಲು ಹೋದಾಗ ಎನ್‌ಕೌಂಟರ್ ನಡೆಯಿತು.