ಪುತ್ತೂರು: ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯನ್ನು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಆಚರಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಇಡೀ ದೇಶಕ್ಕೆ ದಾರಿದೀಪವಾದ ಡಾ..ಬಿ.ಆರ್.ಅಂಬೇಡ್ಕರ್ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಅದರಲ್ಲೂ ಮಹಿಳೆಯರು ಶಿಕ್ಷಣದಲ್ಲಿ ಮುಂದೆ ಬರಬೇಕು ಎಂಬ ಚಿಂತನೆಯನ್ನಿಟ್ಟುಕೊಂಡು ಅದನ್ನು ಕಾರ್ಯರೂಪಕ್ಕೆ ತಂದವರು. ಸ್ವಂತ ನೆಲೆಯಲ್ಲಿ ಅಧಿಕಾರ ಚಲಾಯಿಸಲು ಯಾರಿಗೂ ಅವಕಾಶ ನೀಡಲಿಲ್ಲ. ಬದಲಾಗಿ ತಾನು ರಚಿಸಿದ ಸಂವಿಧಾನದ ರೂಪುರೇಷೆಯಂತೆ ಹಕ್ಕು ಚಲಾಯಿಸುವ ಮೂಲಕ ಒಳ್ಳೆಯ ಕಾರ್ಯವನ್ನು ಮಾಡಿದವರು. ಈ ನಿಟ್ಟಿನಲ್ಲಿ ಅವರ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಅಂಬೇಡ್ಕರ್ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದು ಹೇಳಿದರು.
ಮುಖ್ಯ ಭಾಷಣ ಮಾಡಿದ ಮೈಸೂರು ಸರಕಾರಿ ಸಹಾಯಕ ಅಭಿಯೋಜಕ ಜನಾರ್ದನ, ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಸಂವಿಧಾನಕ್ಕೆ ಸಂಪೂರ್ಣ ರೂಪುರೇಷೆ ಕೊಟ್ಟವರು ಡಾ.ಬಿ.ಆರ್.ಅಂಬೇಡ್ಕರ್ ಮಾತಿಗಿಂತ ಕೃತಿ ಮುಖ್ಯ ಎಂಬ ಚಿಂತನೆಯೊಂದಿಗೆ ಸಂವಿಧಾನವನ್ನು ರಚಿಸಿದ್ದಾರೆ. ಅವರು ರಚಿಸಿದ ಸಂವಿಧಾನ ಇಂದಿಗೂ ಪ್ರಸ್ತುತ. ಆದರೆ ಅಂಬೇಡ್ಕರ್ ಅವರ ಭಾವಚಿತ್ರ, ವಿಚಾರವನ್ನಿಟ್ಟುಕೊಂಡು ಬೇರೆ ಬೇರೆ ಲಾಭ ಪಡೆಯುತ್ತಿರುವುದು ಖೇದಕರ ವಿಚಾರ ಎಂದ ಅವರು, ಅಂಬೇಡ್ಕರ್ ಎತ್ತರಕ್ಕೆ ಬೆಳೆಯಲು ಅವರು ಪಡೆದ ಜ್ಞಾನದಿಂದ. ಅವರ ತತ್ವಗಳನ್ನು ಎಲ್ಲರೂ ಪಾಲಿಸೋಣ ಎಂದರು.
ಸಮಾರಂಭವನ್ನು ಪುತ್ತೂರು ಸಹಾಯಕ ಆಯುಕ್ತರಾದ ಸ್ಟೆಲ್ಲಾ ವರ್ಗೀಸ್ ಉದ್ಘಾಟಿಸಿ, ಸಾಮಾಜಿ ಸಮಸ್ಯೆಗಳನ್ನು ಜಾತಿ-ಮತ ಬೇಧವಿಲ್ಲದೆ ಹೋಗಲಾಡಿಸಿದವರು. ಈ ಮೂಲಕ ಸಮಾನತೆ ಚಿಂತನೆಯೊಂದಿಗೆ ಮಹಿಳೆಯರಿಗೆ ಶಿಕ್ಷಣದ ಅವಕಾಶವನ್ನು ಕಲ್ಪಿಸಿದ ಮಹಾನ್ ವ್ಯಕ್ತಿ ಎಂದರು.
ವೇದಿಕೆಯಲ್ಲಿ ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಮಲ ರಾಮಚಂದ್ರ, ತಹಸೀಲ್ದಾರ್ ಪುರಂದರ, ಪುತ್ತೂರು ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಅರುಣ್ ನಾಗೇಗೌಡ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಶಿಕ್ಷಣಾಧಿಕಾರಿ ಲೋಕೇಶ್ಎಸ್.ಆರ್. ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸರಕಾರಿ ಸೇವೆಯಲ್ಲಿ ನಿವೃತ್ತಿಹೊಂದಿದ ದೇವಮ್ಮ, ಪುತ್ತೂರು ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಹಾಗೂ ಸರಕಾರಿ ಸಹಾಯಕ ಅಭಿಯೋಜಕ ಜನಾರ್ದನ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ವಿವಿಧ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕಿ ವಿನಯ ಕುಮಾರಿ ಸ್ವಾಗತಿಸಿದರು. ಪ್ರೇಮಲತಾ ವಂದಿಸಿದರು. ಸವಿತಾ ಕಾರ್ಯಕ್ರಮ ನಿರೂಪಿಸಿದರು.