ಉದ್ದೇಶಪೂರ್ವಕವಾಗಿ ದಾಳಿ ಮಾಡಿ ಔಷಧಗಳ ನಾಶ ಎಂದು ಆರೋಪಿಸಿದ ಉಕ್ರೇನ್
ನವದೆಹಲಿ: ಉಕ್ರೇನ್‌ನ ಕೀವ್‌ನಲ್ಲಿರುವ ಭಾರತೀಯ ಮೂಲದ ಔಷಧ ಕಂಪನಿಯ ಗೋದಾಮನ್ನು ರಷ್ಯಾ ಕ್ಷಿಪಣಿ ದಾಳಿ ನಡೆಸಿ ನಾಶ ಮಾಡಿದೆ ಎಂದು ಉಕ್ರೇನ್ ಹೇಳಿಕೊಂಡಿದೆ. ಉಕ್ರೇನ್‌ನಲ್ಲಿರುವ ಭಾರತೀಯ ವ್ಯವಹಾರಗಳನ್ನು ಭಾರತದ ಪರಮಾಪ್ತ ಮಿತ್ರ ಎಂದು ಹೇಳಿಕೊಳ್ಳುವ ರಷ್ಯಾ ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ ಎಂದು ಭಾರತದಲ್ಲಿನ ಉಕ್ರೇನ್‌ನ ರಾಯಭಾರ ಕಚೇರಿ ಆರೋಪಿಸಿದೆ.
ಉಕ್ರೇನ್‌ನಲ್ಲಿರುವ ಭಾರತೀಯ ಔಷಧ ಕಂಪನಿ ಕುಸುಮ್‌ನ ಗೋದಾಮಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಭಾರತದೊಂದಿಗೆ ವಿಶೇಷ ಸ್ನೇಹವಿದೆ ಎಂದು ಹೇಳಿಕೊಳ್ಳುತ್ತಾ ರಷ್ಯಾ ಸರ್ಕಾರ ಉದ್ದೇಶಪೂರ್ವಕವಾಗಿ ಭಾರತೀಯ ವ್ಯವಹಾರಗಳನ್ನು ಗುರಿಯಾಗಿಸಿಕೊಂಡಿದೆ, ಮಕ್ಕಳು ಮತ್ತು ವೃದ್ಧರಿಗೆ ಮೀಸಲಾದ ಔಷಧಿಗಳನ್ನು ನಾಶಪಡಿಸುತ್ತಿದೆ ಎಂದು ಉಕ್ರೇನ್‌ನ ರಾಯಭಾರ ಕಚೇರಿ ಆರೋಪಿಸಿದೆ.
ಉಕ್ರೇನ್‌ನಲ್ಲಿರುವ ಬ್ರಿಟನ್ ರಾಯಭಾರಿ ಮಾರ್ಟಿನ್ ಹ್ಯಾರಿಸ್ ಕೂಡ ರಷ್ಯಾದ ದಾಳಿಗಳು ಕೀವ್‌ನಲ್ಲಿರುವ ಪ್ರಮುಖ ಔಷಧ ಕಂಪನಿಯ ಗೋದಾಮನ್ನು ನಾಶಪಡಿಸಿವೆ ಎಂದು ಆರೋಪಿಸಿದ್ದಾರೆ. ರಷ್ಯಾದ ಡ್ರೋನ್‌ಗಳು ದಾಳಿ ನಡೆಸಿವೆ, ಕ್ಷಿಪಣಿಯಲ್ಲ ಎಂದು ಮಾರ್ಟಿನ್ ಸ್ಪಷ್ಟನೆ ನೀಡಿದ್ದಾರೆ. ಗೋದಾಮು ಭಾರತೀಯ ಔಷಧ ಕಂಪನಿಗೆ ಸೇರಿದೆಯೇ ಇಲ್ಲವೇ ಎನ್ನುವ ಬಗ್ಗೆ ಅವರು ಇನ್ನೂ ಸ್ಪಷ್ಟಪಡಿಸಿಲ್ಲ.
ರಷ್ಯಾದ ಡ್ರೋನ್‌ಗಳು ಕೀವ್‌ನಲ್ಲಿರುವ ಪ್ರಮುಖ ಔಷಧ ಗೋದಾಮನ್ನು ಸಂಪೂರ್ಣವಾಗಿ ನಾಶಪಡಿಸಿವೆ. ವೃದ್ಧರು ಮತ್ತು ಮಕ್ಕಳಿಗೆ ಅಗತ್ಯವಿರುವ ಔಷಧಿಗಳ ದಾಸ್ತಾನುಗಳನ್ನು ಸುಟ್ಟುಹಾಕಲಾಗಿದೆ. ಉಕ್ರೇನಿಯನ್ ನಾಗರಿಕರ ವಿರುದ್ಧ ರಷ್ಯಾದ ಭಯೋತ್ಪಾದನಾ ಅಭಿಯಾನ ಮುಂದುವರಿದಿದೆ ಎಂದು ಮಾರ್ಟಿನ್ ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.