ವಕ್ಫ್ ಕಾಯಿದೆ ವಿರೋಧಿ ಪ್ರತಿಭಟನೆ ವೇಳೆ ಭಾರಿ ಹಿಂಸಾಚಾರ
ಕೋಲ್ಕತ್ತಾ: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆ ಮುಂದುವರಿದಿದೆ. ತಂದೆ ಮತ್ತು ಮಗ ಸೇರಿ ಈವರೆಗೆ ಒಟ್ಟು ಮೂವರು ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರದ ಪ್ರಾರ್ಥನೆಯ ನಂತರ ಭುಗಿಲೆದ್ದ ಹಿಂಸಾಚಾರ ಮುರ್ಷಿದಾಬಾದ್ ಜಿಲ್ಲೆಯ ಹಲವು ಭಾಗಗಳಿಗೆ ವ್ಯಾಪಿಸಿದ್ದು, ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿವೆ. ಕಳೆದ ರಾತ್ರಿ ಪೊಲೀಸರು, ಅರೆಸೇನಾ ಪಡೆಗಳು ಸಂಪೂರ್ಣ ಗಸ್ತು ತಿರುಗಿದ್ದು, ಸುತಿ, ಧುಲಿಯನ್, ಸಂಸರ್‌ಗಂಜ್ ಮತ್ತು ಜಂಗಿಪುರ ಪ್ರದೇಶಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿವೆ. ಹಿಂಸಾಚಾರ ಪೀಡಿತ ಮುರ್ಷಿದಾಬಾದ್‌ನಲ್ಲಿ ಸ್ಥಳೀಯವಾಗಿ ಲಭ್ಯವಿರುವ ಸುಮಾರು 300 ಬಿಎಸ್‌ಎಫ್ ಸಿಬ್ಬಂದಿಯಲ್ಲದೆ, ಪಶ್ಚಿಮ ಬಂಗಾಳ ಸರ್ಕಾರದ ಕೋರಿಕೆಯ ಮೇರೆಗೆ ಇನ್ನೂ 5 ಕಂಪನಿಗಳನ್ನು ನಿಯೋಜಿಸಲಾಗಿದೆ.
ಮುರ್ಷಿದಾಬಾದ್, ಮಾಲ್ಡಾ, ದಕ್ಷಿಣ 24 ಪರಗಣ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಪೊಲೀಸ್ ವಾಹನಗಳಿಗೆ ಬೆಂಕಿ ವ್ಯಾಪಕವಾಗಿ ಲೂಟಿ ಮಾಡಲಾಗಿದೆ. ಭದ್ರತಾ ಪಡೆಗಳ ಮೇಲೆ ಕಲ್ಲು ತೂರಿ, ರಸ್ತೆಗಳನ್ನು ಮುಚ್ಚಲಾಗಿತ್ತು. ಹಿಂದುಗಳ ಮನೆ, ಅಂಗಡಿ, ವಾಹನಗಳನ್ನು ಗುರಿ ಮಾಡಿಕೊಂಡು ವ್ಯವಸ್ಥಿತವಾಗಿ ಹಿಂಸಾಚಾರ ಎಸಗಲಾಗಿದೆ ಎಂದು ಬಿಜೆಪಿ ಅರೋಪಿಸಿದೆ. ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ರಾಜ್ಯದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ ಎಂದು ಆರೋಪಿಸಿದ್ದಾರೆ.