ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಆರೋಪಿಗಳಾಗಿರುವ ಪ್ರಕರಣ
ನವದೆಹಲಿ : ನ್ಯಾಶನಲ್ ಹೆರಾಲ್ಡ್ ಭ್ರಷ್ಟಾಚಾರ ಕೇಸಿಗೆ ಸಂಬಂಧಪಟ್ಟಂತೆ ಕಾಂಗ್ರೆಸ್‌ನ 600 ಕೋಟಿ ರೂ.ಗೂ ಮಿಕ್ಕಿದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಪ್ರಾರಂಭಿಸಿದೆ.
ಕಾಂಗ್ರೆಸ್ ನಿಯಂತ್ರಿತ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ವಿರುದ್ಧದ ಹಣ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ಜಪ್ತಿ ಮಾಡಲಾಗಿರುವ 661 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯ ಶನಿವಾರ ನೋಟಿಸ್ ಜಾರಿ ಮಾಡಿದೆ. ದೆಹಲಿಯ ಐಟಿಒದಲ್ಲಿರುವ ಹೆರಾಲ್ಡ್ ಹೌಸ್, ಮುಂಬಯಿಯ ಬಾಂದ್ರಾದಲ್ಲಿರುವ ಕಟ್ಟಡ ಮತ್ತು ಲಕ್ನೋದ ಬಿಶೇಶ್ವರ್ ನಾಥ್ ರಸ್ತೆಯಲ್ಲಿರುವ ಎಜೆಎಲ್ ಕಟ್ಟಡವನ್ನು ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿದೆ.
ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯ ಸೆಕ್ಷನ್ (8) ಮತ್ತು ನಿಯಮ 5(1)ರ ಅಡಿಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಜಾರಿ ನಿರ್ದೇಶನಾಲಯ, ನವೆಂಬರ್ 2023ರಲ್ಲಿ ಈ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಇದು ಅಕ್ರಮವಾಗಿ ಗಳಿಸಿದ ಸಂಪತ್ತಾಗಿದೆ ಎಂದು ಹೇಳಿದೆ. ದೆಹಲಿ, ಮುಂಬಯಿ ಮತ್ತು ಲಕ್ನೋದಲ್ಲಿರುವ ಎಜೆಎಲ್‌ನ 661 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ಮತ್ತು ಎಜೆಎಲ್‌ನ 90.2 ಕೋಟಿ ಮೌಲ್ಯದ ಷೇರುಗಳನ್ನು ಜಾರಿ ನಿರ್ದೇಶನಾಲಯ ನವಂಬರ್ 20, 2023 ರಂದು ತಾತ್ಕಾಲಿಕ ಲಗತ್ತು ಆದೇಶ (ಪಿಎಒ) ಹೊರಡಿಸುವ ಮೂಲಕ ಮುಟ್ಟುಗೋಲು ಹಾಕಿಕೊಂಡಿತ್ತು.
ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಖಾಸಗಿ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಹಲವಾರು ಪ್ರಮುಖ ರಾಜಕೀಯ ವ್ಯಕ್ತಿಗಳು ಮತ್ತು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್)ಗೆ ಸೇರಿದ 2000 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಆಸ್ತಿಗಳನ್ನು ವಂಚನೆಯಿಂದ ಸ್ವಾಧೀನಪಡಿಸಿಕೊಳ್ಳುವಲ್ಲಿ ಹಣ ವರ್ಗಾವಣೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿಲಾಗಿದೆ. ಯಂಗ್ ಇಂಡಿಯನ್ ಎಂಬ ಖಾಸಗಿ ಕಂಪನಿಯು ಕ್ರಿಮಿನಲ್ ಪಿತೂರಿ ನಡೆಸಿದೆ ಎಂದು ದೂರಿನಲ್ಲಿ ಆರೋಪಿಸಿತ್ತು. ನ್ಯಾಷನಲ್ ಹೆರಾಲ್ಡ್ ಅನ್ನು ಎಜೆಎಲ್ ಪ್ರಕಟಿಸುತ್ತದೆ ಮತ್ತು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿದೆ. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಯಂಗ್ ಇಂಡಿಯನ್‌ನ ಬಹುಪಾಲು ಷೇರುದಾರರಾಗಿದ್ದು, ಇಬ್ಬರೂ ತಲಾ ಶೇ.38 ರಷ್ಟು ಷೇರುಗಳನ್ನು ಹೊಂದಿದ್ದಾರೆ.