ಪರಶುರಾಮನಿಂದ ಸೃಷ್ಟಿಸಲ್ಪಟ್ಟ ತುಳುನಾಡಿನ ಹಬ್ಬಗಳಲ್ಲಿ ಬಿಸು ಹಬ್ಬದ ಸಡಗರವೇ ವಿಶೇಷ . ತುಳುವರ ವರುಷದ ಆದಿಮಾಸ “ಪಗ್ಗು” ತಿಂಗಳ ಮೊದಲ ದಿನವೇ ಬಿಸು. ಈ ದಿನವು ಶುಭಕರವಾದುದರಿಂದ ಜನರು ಹೊಸ ಹೊಸ ಯೋಜನೆಗಳಿಗೆ ಹೆಜ್ಜೆಇಡುತ್ತಾರೆ. ಮಾತ್ರವಲ್ಲ ಭೂಮಿ, ವಾಹನ, ಹೊಸ ವಸ್ತುಗಳ ಖರೀದಿ, ಮಕ್ಕಳಿಗೆ ಕಿವಿ ಚುಚ್ಚುವ ಶಾಸ್ತ್ರಗಳನ್ನು ಮಾಡುತ್ತಾರೆ.
ಹಿಂದೆ ನಮ್ಮ ಹಿರಿಯರು, ತಂದೆ ತಾಯಂದಿರು ಮನೆ ಅಥವಾ ಮರಗಳ ನೆರಳು ಹಾಗೂ ಆಕಾಶ ನೋಡಿ ಸಮಯವನ್ನು ನಿರ್ಧರಿಸುತ್ತಿದ್ದರು. ಅದೇ ರೀತಿ ಸೂರ್ಯನು ಮೇಷ ರಾಶಿಗೆ ಪ್ರವೇಶಿಸುವ ಕ್ಷಣವನ್ನು ಸೌರಮಾನ ಸಂವತ್ಸರದ ಮೊದಲ ದಿನವೆಂದು ಪರಿಗಣಿನಸಿ ಬಿಸು ಹಬ್ಬವನ್ನಾಚರಿಸಲಾಗುತ್ತದೆ.
ಗಿಡಮರಗಳು ಹೂ ಮುಡಿದು, ಕಾಯಿ ಹಡೆದು, ಎಲೆ ಹಸಿರ ಬಳ್ಳಿಗಳು ಮರವನಪ್ಪಿ ಗಾಳಿಗೆ ಮುಖ ಚಾಚಿ ಸುಖಿಸುವ ವಸಂತ ಋತುವಿನ ಹಬ್ಬ. ವಾತಾವರಣ ಹಸಿರಾದಾಗ ಮೃಗ, ಖಗ, ಮಾನವ, ಜಲಚರಗಳ ನರನಾಡಿಗಳಲ್ಲಿ ಕಾಣುವ ಚೈತನ್ಯದ ಸೊಬಗು ಪರಮಾಧ್ಬುತ.
ಬಿಸು ಹಬ್ಬದ ದಿನ ಬೆಳಗ್ಗೆ ಬೇಗನೆ ಎದ್ದು ಶುಚಿಯಾಗಿ ದೇವರಕೋಣೆ, ಭೂತ ಚಾವಡಿಗಳಲ್ಲಿ ಬಿಸು ಕಣಿ ಇಡುವ ಪದ್ದತಿಯಿದೆ. ಬಿಸು ಕಣಿ ಎಂದರೆ ಕೊಡಿ ಬಾಳೆ ಎಲೆಯಲ್ಲಿ ಅಕ್ಕಿ, ತೆಂಗಿನ ಕಾಯಿ, ಹೂವು, ಚಿನ್ನಾಭರಣ, ದೀಪ, ಕನ್ನಡಿ, ತಾಂಬ್ರದ ಚೆಂಬಿನಲ್ಲಿ ನೀರು, ತೇದ ಗಂಧ, ಎಲೆ ಅಡಿಕೆ, ನಾಣ್ಯ (ಹಿಂದೆ ಒಂದುಕಾಲು ರೂಪಾಯಿ ಇಡಲಾಗುತ್ತಿತ್ತು), ಮನೆಯಲ್ಲೇ ಬೆಳೆಸಿದ ಹೊಸ ಬೆಳೆ, ಹಣ್ಣು ತರಕಾರಿಗಳನ್ನು ಜೋಡಿಸಲಾಗುವುದು. ತೆಂಗಿನ ಸಿಪ್ಪೆಯಲ್ಲಿ ಕೆಂಡ ಇಟ್ಟು ಗಂಧದ ಚೆಕ್ಕೆ ಹಾಗೂ ತುಪ್ಪ (ಗಂಧಾ ಧೂಪ) ಹಾಕಲಾಗುವುದು. ನಂತರ ಕುಟುಂಬದ ಎಲ್ಲಾ ಸದಸ್ಯರು ಬಿಸು ಕಣಿಗೆ ಪೂಜೆ ಸಲ್ಲಿಸಿ ಕನ್ನಡಿಯನ್ನು ನೋಡಿ ಗಂಧವನ್ನು ಹಣೆಗೆ ಹಚ್ಚಿಕೊಂಡು ಹಿರಿಯರ ಆಶೀರ್ವಾದ ಪಡೆದು ಭೂತ ಚಾವಡಿ, ದೇವಸ್ಥಾನ, ನಾಗಬನಗಳಿಗೆ ಪೂಜೆ ಸಲ್ಲಿಸುವುದು ವಾಡಿಕೆ.
ಇದೇ ಶುಭದಿನದಂದು “ಕೈ ಬಿತ್ತ್” ಹಾಕುವ ಕ್ರಮವಿದೆ. ಅಂದರೆ ವರುಷದ ಮೊದಲ ದಿನ ಉಳುವ ದನಗಳನ್ನು ಗದ್ದೆಗೆ ಇಳಿಸಿ, ಉತ್ತು ಬಿತ್ತನೆ ಮಾಡುವುದು.
ಪಾಯಸ, ಗೇರುಬೀಜದ ಪಲ್ಯ ಹೀಗೆ ವಿಶೇಷ ಭಕ್ಷ್ಯಗಳ ಸವಿಯೊಡನೆ ಬಿಸು ಹಬ್ಬ ಸಾಗುವುದು.
ಗುರು ಹಿರಿಯರ ಹಾರೈಕೆಯೊಂದಿಗೆ ನಮ್ಮೆಲ್ಲರ ಬಾಳಲ್ಲಿ ಹಬ್ಬ ನಿರಂತರವಾಗಿರಲಿ.
ಡಾ. ಶರ್ಮಿಳ ನಟರಾಜ್