ಪಶ್ಚಿಮ ಬಂಗಾಳದಲ್ಲಿ ಇಡೀ ದಿನ ನಡೆದ ಹಿಂಸಾಚಾರ
ಕೋಲ್ಕತ್ತಾ: ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಮುಸ್ಲಿಮರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿ ಎರಡು ರೈಲುಗಳನ್ನು ಜಖಂಗೊಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಪ್ರತಿಭಟನೆ ನಡೆದಿತ್ತು. ರಾತ್ರಿ ಪ್ರತಿಭಟನೆ ಹಿಂಸಚಾರಕ್ಕೆ ತಿರುಗಿದೆ. ಘಟನೆಯ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ದಾಳಿಯಲ್ಲಿ ಕೆಲವು ಪ್ರಯಾಣಿಕರು ಮತ್ತು ಏಳರಿಂದ ಹತ್ತು ಪೊಲೀಸರು ಗಾಯಗೊಂಡಿದ್ದಾರೆ. ಹಿಂಸಾಚಾರವನ್ನು ನಿಯಂತ್ರಿಸಲು ಗಡಿ ಭದ್ರತಾ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಅಲ್ಪಸಂಖ್ಯಾತರ ಪ್ರಾಬಲ್ಯ ಇರುವ ಮುರ್ಷಿದಾಬಾದ್ ಜಿಲ್ಲೆಯ ನಿಮ್ತಿತಾ ಮತ್ತು ಸುಟಿಯಲ್ಲಿ ಉದ್ವಿಗ್ನತೆ ಉಂಟಾಗಿತ್ತು. ನಿಮ್ತಿತಾ ರೈಲು ನಿಲ್ದಾಣದಲ್ಲಿ, ಪ್ರತಿಭಟನಾಕಾರರು ಗಂಟೆಗಟ್ಟಲೆ ರೈಲ್ವೆ ಹಳಿಗಳನ್ನು ತಡೆದು ರೈಲ್ವೆ ಆಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ರೈಲ್ವೆ ಪೊಲೀಸ್ ಪಡೆ ಸಿಬ್ಬಂದಿ ಲಾಠಿ ಪ್ರಹಾರ ನಡೆಸಬೇಕಾಯಿತು. ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿ ಪೊಲೀಸರೊಂದಿಗೆ ಘರ್ಷಣೆ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿ, ಧ್ವಂಸಗೊಳಿಸಿದ್ದಾರೆ.
ಮುರ್ಷಿದಾಬಾದ್ ಮತ್ತು ಉತ್ತರ 24 ಪರಗಣಗಳ ಇತರ ಸ್ಥಳಗಳು ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಗಲಭೆಗೆ ಕಾರಣರಾದ ದುಷ್ಕರ್ಮಿಗಳ ವಿರುದ್ಧ ತಕ್ಷಣ ಕ್ರಮಕ್ಕೆ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಸೂಚನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪ್ರತಿಭಟನೆಯ ವಿಡಿಯೋಗಳನ್ನು ಹಾಕಿ ಮಮತಾ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಒಂದು ನಿರ್ದಿಷ್ಟ ಗುಂಪಿನ ತೀವ್ರಗಾಮಿಗಳಿಂದ ಪ್ರತಿಭಟನೆ ಹೆಸರಿನಲ್ಲಿ ರಾಜ್ಯವು ದೊಡ್ಡ ಪ್ರಮಾಣದ ಹಿಂಸಾಚಾರ, ಅರಾಜಕತೆ ಮತ್ತು ಕಾನೂನುಬಾಹಿರ ಚಟುವಟಿಕೆಯನ್ನು ನೋಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದ ಸಂವಿಧಾನವನ್ನು ವಿರೋಧಿಸುತ್ತೇವೆ ಮತ್ತು ದೇಶದ ಕಾನೂನನ್ನು ವಿರೋಧಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿರುವ ಈ ಜನರು ಬೀದಿಗಳನ್ನು ವಶಪಡಿಸಿಕೊಂಡಿದ್ದಾರೆ. ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳನ್ನು ತಮ್ಮ ಇಚ್ಚೆಯಂತೆ ಧ್ವಂಸ ಮಾಡುತ್ತಿದ್ದಾರೆ ಎಂದು ಸಿಟ್ಟು ಹೊರಹಾಕಿದ್ದಾರೆ.