ಎರಡು ಕಾರ್ಯಾಚರಣೆಯಲ್ಲಿ ಐವರು ಉಗ್ರರ ಹತ್ಯೆ
ಶ್ರೀನಗರ: ಕಾಶ್ಮೀರದಲ್ಲಿ ಮತ್ತೆ ಉಗ್ರರು ನುಸುಳಿಕೊಂಡು ಬರುವ ಕೃತ್ಯಗಳು ಶುರುವಾಗಿದ್ದು, ಶುಕ್ರವಾರ ತಡರಾತ್ರಿ ಗಡಿ ದಾಟಿ ಬರಲು ಯತ್ನಿಸಿದ ಉಗ್ರರ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಯೋಧ ತೀವ್ರ ಗಾಯಗೊಂಡು ಬಳಿಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಉಗ್ರರ ನುಸುಳಿ ಬರುವ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಈ ಪ್ರದೇಶವನ್ನು ಭದ್ರತಾ ಪಡೆ ಸುತ್ತುವರಿದಿದ್ದು, ತೀವ್ರ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸೇನೆಯ ಮೂಲಗಳು ತಿಳಿಸಿದೆ.
ಜಮ್ಮುವಿನ ಅಕ್ನೂರ್ ವಲಯದ ಭಟ್ಟಲ್ ಎಂಬಲ್ಲಿ ಉಗ್ರರು ಗಡಿದಾಟಿ ಬರುತ್ತಿರುವ ಚಲನವಲನ ಪತ್ತೆಯಾಗಿ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು. ಕೇರಿ ಭಟ್ಟಲ್ ಎಂಬಲ್ಲಿ ಉಗ್ರರು ನುಸುಳಿಬರುತ್ತಿರುವುದು ಕಂಡುಬಂದಿದ್ದು, ಭಾರಿ ಗುಂಡಿನ ಕಾಳಗ ನಡೆದಿದೆ. ಸೇನೆಯ ಜೂನಿಯರ್ ಕಮಿಷನ್ಡ್ ಆಫೀಸರ್ ಒಬ್ಬರು ಗುಂಡಿನ ಕಾಳಗದಲ್ಲಿ ಗಾಯಗೊಂಡು ಬಳಿಕ ಮೃತಪಟ್ಟಿದ್ದಾರೆ.
ಇನ್ನೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಕಿಸ್ತ್ವಾರ ಜಿಲ್ಲೆಯಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಶುಕ್ರವಾರ ನಸುಕಿನ ಹೊತ್ತು ನಡೆದ ಇನ್ನೊಂದು ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಗುಂಡಿಗೆ ಬಲಿಯಾಗಿದ್ದಾರೆ.