ಮಾದಕವಸ್ತು, ಕಾರು ಸಹಿತ 9.24 ಲ.ರೂ. ಸೊತ್ತು ವಶ
ಮಂಗಳೂರು : ನಗರದ ಸುರತ್ಕಲ್ ಬೀಚ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರನ್ನು ಮಂಗಳೂರು ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಿಂದ ನಿಷೇಧಿತ ಎಂಡಿಎಂಎಯನ್ನು ತಂದು ಸುರತ್ಕಲ್ ಸುತ್ತಮುತ್ತ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರನ್ನು ಗುರಿಮಾಡಿಕೊಂಡು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಸುರತ್ಕಲ್ ನಿವಾಸಿಗಳಾದ ಮೊಹಮ್ಮದ್ ಆಸಿಫ್ (24), ಅಸ್ಕರ್ ಅಲಿ (31) ಮತ್ತು ಹಳೆಯಂಗಡಿಯ ಮೊಹಮ್ಮದ್ ರಶೀಮ್ (24) ಎಂದು ಗುರುತಿಸಲಾಗಿದೆ. ಈ ಮೂವರು ಬೆಂಗಳೂರಿನಿಂದ ಎಂಡಿಎಂಎ ಖರೀದಿಸಿ ಖಾಸಗಿ ಬಸ್ ಪಾರ್ಸೆಲ್ ಸೇವೆಗಳ ಮೂಲಕ ಮಂಗಳೂರಿಗೆ ತರಿಸಿಕೊಂಡು ಸುರತ್ಕಲ್‌ನ ಮುಕ್ಕಾ-ಮಲೆಮಾರ್ ಬೀಚ್ ರಸ್ತೆಯ ಸುತ್ತಮುತ್ತಲಿನ ಸಾರ್ವಜನಿಕರು ಮತ್ತು ವಿದ್ಯಾರ್ಥಿ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿದ್ದರು. ಟೊಯೋಟಾ ಇನ್ನೋವಾ ಕಾರನ್ನು ಮಾದಕ ವಸ್ತು ಮಾರಾಟಕ್ಕೆ ಬಳಸುತ್ತಿದ್ದರು. ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಏಪ್ರಿಲ್ 10ರಂದು ಸಿಸಿಬಿ ತಂಡ ಇನ್ನೋವಾ ಕಾರನ್ನು ತಡೆಹಿಡಿದು ಆರೋಪಿಗಳ ಬಳಿಯಿದ್ದ ಸುಮಾರು 1 ಲಕ್ಷ ರೂ. ಮೌಲ್ಯದ 10 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು.
ಮಾದಕ ವಸ್ತುಗಳ ಜೊತೆಗೆ 4,000 ರೂ. ನಗದು, ನಾಲ್ಕು ಮೊಬೈಲ್ ಫೋನ್‌ಗಳು ಮತ್ತು ಕಾರನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಆಸ್ತಿಯ ಒಟ್ಟು ಮೌಲ್ಯ 9,24,000 ರೂ. ಎಂದು ಅಂದಾಜಿಸಲಾಗಿದೆ.

ಆರೋಪಿಗಳು ಮಾದಕ ವಸ್ತು ಮಾರಿ ಬಂದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದರು. ಮೊಹಮ್ಮದ್ ಆಸಿಫ್ ವಿರುದ್ಧ ಈಗಾಗಲೇ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎರಡು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ, ಅವುಗಳಲ್ಲಿ ಒಂದು ಮಾದಕ ದ್ರವ್ಯ ಮಾರಾಟಕ್ಕೆ ಸಂಬಂಧಿಸಿದೆ ಮತ್ತು ಇನ್ನೊಂದು ಹಲ್ಲೆಗೆ ಸಂಬಂಧಿಸಿದ್ದು. ಬಂಧಿತ ಮೂವರು ಆರೋಪಿಗಳು ದೊಡ್ಡ ಡ್ರಗ್ ಜಾಲಕ್ಕೆ ಸೇರಿದವರು ಎಂದು ಪೊಲೀಸರು ದೃಢಪಡಿಸಿದ್ದಾರೆ.