ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಎರಡನೇ ವಿಡಿಯೋ ಮಾಡಿರುವುದಕ್ಕೆ ಆಕ್ಷೇಪ
ಬೆಂಗಳೂರು : ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣ ಸಂಬಂಧ ಧರ್ಮಸ್ಥಳವನ್ನು ಗುರಿಯಾಗಿಟ್ಟುಕೊಂಡು ಮಾಡಿದ್ದ ವಿಡಿಯೋವನ್ನು ತೆಗೆದು ಹಾಕುವಂತೆ ನೀಡಿದ್ದ ಆದೇಶ ಉಲ್ಲಂಘಿಸಿದ ಯುಟ್ಯೂಬರ್ ಎಂ ಡಿ ಸಮೀರ್ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಧರ್ಮಸ್ಥಳ ಪರ ಡಿ. ಹರ್ಷೇಂದ್ರ ಕುಮಾರ್ ಮತ್ತು ನಿಶ್ಚಲ್ ಡಿ. ಹೂಡಿದ್ದ ಮಾನನಷ್ಟ ಮೊಕದ್ದಮೆ ಅರ್ಜಿ ಪರಿಶೀಲಿಸಿದ ಬಳಿಕ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಧೀಶರಾದ ಎಸ್. ನಟರಾಜ್ ಅವರು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ವಾದ ಆಲಿಸಿದ ಬಳಿಕ ನ್ಯಾಯಾಲಯ, ಯೂಟ್ಯೂಬರ್‌ಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಅಲ್ಲದೆ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಹರಿಬಿಟ್ಟಿದ್ದ ವಿಡಿಯೋ ತಕ್ಷಣ ಡಿಲೀಟ್ ಮಾಡಲು ಆದೇಶಿಸಿದೆ.
ಅರ್ಜಿದಾರರ ಪರ ರಾಜಶೇಖರ ಹಿಲ್ಯಾರ್ ವಾದ ಮಂಡಿಸಿ, ‘ಯುಟ್ಯೂಬರ್ ಸಮೀರ್ ಎಂಬಾತ ಹರಿಬಿಟ್ಟ ವಿಡಿಯೋದ ವಿರುದ್ಧ ನ್ಯಾಯಾಲಯ ವಿಡಿಯೋ ಕಿತ್ತು ಹಾಕುವಂತೆ ಮತ್ತು ಈ ಕುರಿತು ಮತ್ತೆ ವಿಡಿಯೋ ಮಾಡದಂತೆ ತಡೆಯಾಜ್ಞೆ ನೀಡಿತ್ತು. ಆದರೆ ನ್ಯಾಯಾಲಯದ ತಡೆಯಾಜ್ಞೆ ಉಲ್ಲಂಘಿಸಿ ಎರಡನೇ ವಿಡಿಯೋ ಬಿಟ್ಟದ್ದ ಸಮೀರ್ ಎಂಬ ವ್ಯಕ್ತಿ ಹಾಗೂ ಯೂಟ್ಯೂಬ್ ಚಾನಲ್ ದೂತದ ಮೇಲೆ ಮಾನನಷ್ಟ ಮೊಕದ್ದಮೆ ಕಾಯಿದೆಯಡಿ ಕ್ರಮ ಮುಂದುವರಿಸಬೇಕು ಎಂದು ಕೋರಿದ್ದಾರೆ.
ಧರ್ಮಸ್ಥಳ ಪರ ಡಿ. ಹರ್ಷೇಂದ್ರ ಕುಮಾರ್ ಮತ್ತು ಅವರ ಪುತ್ರ ನಿಶ್ಚಲ್ ಡಿ. ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಡಿ.ಹರ್ಷೇಂದ್ರ ಕುಮಾರ್ ಹೆಗಡೆ ಅವರು ರಾಜ್ಯಸಭಾ ಸಂಸದ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಸಹೋದರ.
ಎರಡು ತಿಂಗಳ ಹಿಂದೆ ಯುಟ್ಯೂಬರ್ ಸಮೀರ್ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಕೇಸ್‌ನ ಬಗ್ಗೆ ತನಿಖಾಧಾರಿತ ವಿಡಿಯೋ ಮಾಡಿ ಯುಟ್ಯೂಬ್‌ನಲ್ಲಿ ಹಾಕಿದ್ದರು. ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿಪರ-ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಿಡಿಯೋವನ್ನು ಒಂದು ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದರು. ಯುಟ್ಯೂಬರ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಸಮೀರ್ ಮಾಡಿದ್ದ ವಿಡಿಯೋದಲ್ಲಿ ಎಐ ತಂತ್ರಜ್ಞಾನ ಬಳಸಿಕೊಂಡು ಸೌಜನ್ಯ ಕೊಲೆ ನಡೆದ ದಿನ ಆ ನಂತರ ತನಿಖೆಯ ಬಗ್ಗೆ ತೋರಿಸಲಾಗಿತ್ತು. ಆ ಘಟನೆಗೆ ಆ ಊರಿಗೆ ಗೌಡರೇ ಕಾರಣ ಎಂದು ಉಲ್ಲೇಖ ಮಾಡಲಾಗಿತ್ತು. ಇದು ನೇರವಾಗಿ ಧರ್ಮಸ್ಥಳ ಧರ್ಮಾಧಿಕಾರಿಗಳ ಕುಟುಂಬದ ಹೆಸರನ್ನು ಉಲ್ಲೇಖ ಮಾಡದಿದ್ದರೂ ಅವರನ್ನೇ ಗುರಿಯಾಗಿಸಿಕೊಂಡು ಮಾಡಿದ ವಿಡಿಯೋ ಎಂಬುದು ವೀಕ್ಷಕರಿಗೆ ಮನದಟ್ಟಾಗುವಂತಿತ್ತು. ಜತೆಗೆ ಧರ್ಮಸ್ಥಳ, ಅದರ ಆಡಳಿತ ಸಂಸ್ಥೆಗಳ ಬಗ್ಗೆ ಸಾಕಷ್ಟು ಆರೋಪಗಳನ್ನು ಮಾಡಲಾಗಿತ್ತು.