ಪುತ್ತೂರು: ಪುತ್ತೂರಿನ ಏಳ್ಮುಡಿಯಲ್ಲಿರುವ ಕೆನರಾ ಬ್ಯಾಂಕ್ ಬಳಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ “ಪ್ರೇರಣಾ” ಸಂಸ್ಥೆ ಹಾಗೂ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಐದು ದಿನಗಳ ಕಾಲ ನಡೆಯುವ “ಪ್ರೇರಣಾ ಬೇಸಿಗೆ ಶಿಬಿರ”ಕ್ಕೆ ಶುಕ್ರವಾರ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಒಕ್ಕಲಿಗ ಸೌಧ ಸಭಾಭವನದಲ್ಲಿ ಚಾಲನೆ ನೀಡಲಾಯಿತು.

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಅಧ್ಯಕ್ಷ ಡಿ.ವಿ.ಮನೋಹರ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ನೈಸರ್ಗಿಕ ಪರಿಸರವಾದ ಹಳ್ಳಿಗಳಲ್ಲಿ ಜೀವಿಸುವುದೇ ಪುಣ್ಯ. ಈ ನಿಟ್ಟಿನಲ್ಲಿ ಮಕ್ಕಳಿಗೆ ನೈಸರ್ಗಿಕ ಪರಿಸರದ ಕುರಿತು ತಿಳಿದುಕೊಳ್ಳಲು ಅಲ್ಲಿನ ವಾತಾವರಣದಲ್ಲಿ ಬಿಡಬೇಕು. ಹಾಗೆಯೇ ಬೇಸಿಗೆ ಶಿಬಿರದಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ ಧೈರ್ಯದ ಜತೆ ಕೌಶಲ್ಯ ಜಾಸ್ತಿಯಾಗುತ್ತದೆ. ಇದಕ್ಕೆ ಪ್ರೇರಣಾ ಬೇಸಿಗೆ ಶಿಬಿರ ಪೂರಕವಾಗಲಿ. ಪಾಲ್ಗೊಂಡ ಎಲ್ಲಾ ಮಕ್ಕಳು ಶಿಬಿರದ ಸದುಪಯೋಗವನ್ನು ಉತ್ತಮ ರೀತಿಯಲ್ಲಿ ಪಡೆದುಕೊಳ್ಳಿ ಎಂದರು.

ಶಿಬಿರದ ಸಂಪನ್ಮೂಲ ವ್ಯಕ್ತಿ, ನ್ಯೂಸ್ ಪುತ್ತೂರುನ ಅಧ್ಯಕ್ಷ ಸೀತಾರಾಮ ಕೇವಳ ಶಿಬಿರದ ಕುರಿತು ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತರುವ ಜತೆಗೆ ತನ್ನನ್ನು ತಾನು ಸಂಪೂರ್ಣ ತೊಡಗಿಸಿಕೊಳ್ಳಲು ಶಿಬಿರ ಮುಖ್ಯ ಪಾತ್ರ ವಹಿಸುತ್ತದೆ. ಮುಖ್ಯವಾಗಿ ಸ್ಪೀಚ್ ಆ್ಯಂಡ್ ಆ್ಯಂಕರಿಂಗ್ ಕುರಿತು ಈಗಲೇ ಎಳೆಯ ಮಕ್ಕಳಿಗೆ ತರಬೇತು ನೀಡುವುದರಿಂದ ಮುಂದೆ ವೇದಿಕೆಯ ಮುಂದೆ ನಿಂತು ಮಾತನಾಡುವ ಭಯ ಹೊರಟುಹೋಗುತ್ತದೆ. ಈ ನಿಟ್ಟಿನಲ್ಲಿ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಮಕ್ಕಳು ತನ್ಮತೆಯಿಂದ ಪಡೆದುಕೊಳ್ಳಿ ಎಂದು ಹೇಳಿ, ಐದು ದಿನಗಳ ಕಾಲ ನಡೆಯುವ ಶಿಬಿರದ ಸಂಪೂರ್ಣ ಮಾಹಿತಿ ನೀಡಿದರು.

ಮುಖ್ಯ ಅತಿಥಿಯಾಗಿ ನಿರ್ದೇಶಕರಾದ ಪ್ರವೀಣ್ ಕುಂಟ್ಯಾಣ ಮಾತನಾಡಿ,, ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಕೌಶಲ್ಯ ಮುಖ್ಯವಾಗಿದೆ. ಅದರಲ್ಲೂ ಬೇಸಿಗೆ ಶಿಬಿರಗಳು ಸಿಗುವುದು ಅಪರೂಪ. ಇದೀಗ ಪ್ರೇರಣಾ ಸಂಸ್ಥೆ ಹಮ್ಮಿಕೊಂಡ ಇಂತಹಾ ಶಿಬಿರಗಳು ಕೌಶಲ್ಯ ಹೆಚ್ಚಿಸಲು ಪೂರಕ ವಾತಾವರಣ ಉಂಟು ಮಾಡಲಿದೆ. ಪಾಲ್ಗೊಂಡ ಮಕ್ಕಳು ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದರು.
ಪ್ರೇರಣಾ ಸಂಸ್ಥೆಯ ಆಡಳಿತ ನಿರ್ದೇಶಕ ಮುರಳೀಧರ ಕೆ.ಎಲ್. ಕಾರ್ಯಕ್ರಮದ ಅ ಧ್ಯಕ್ಷತೆ ವಹಿಸಿ ಮಾತನಾಡಿ, ಶಿಬಿರಗಳಲ್ಲಿ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಕೌಶಲ್ಯದ ಜತೆ ಹೊರ ಪ್ರಪಂಚದಲ್ಲಿ ತಮ್ಮ ಪ್ರತಿಭೆಗಳನ್ನು ತೋರ್ಪಡಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪಾಲ್ಗೊಂಡ ಮಕ್ಕಳೆಲ್ಲರೂ ಶಿಬಿರದ ಪ್ರಯೋಜನ ಪಡೆದುಕೊಳ್ಳಿ ಎಂದರು.
ವೇದಿಕೆಯಲ್ಲಿ ಪ್ರೇರಣಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಮೋಕ್ಷಿತಾ ಮಿಥುನ್, ಮ್ಯಾನೇಜರ್ ದಯಾಮಣಿ ಉಪಸ್ಥಿತರಿದ್ದರು. ಪ್ರೇರಣಾ ಸಂಸ್ಥೆಯ ನಿರ್ದೇಶಕ ವಸಂತ ವೀರಮಂಗಲ ಸ್ವಾಗತಿಸಿದರು. ನಿರ್ದೇಶಕ ನಾಗೇಶ್ ಕೆಡೆಂಜಿ ವಂದಿಸಿದರು.
ಐದು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಒರಿಗಾಮಿ, ಸ್ಪೀಚ್ ಆ್ಯಂಡ್ ಆ್ಯಂಕರಿಂಗ್, ಆರ್ಟಿಸ್ಟಿಕ್ ಆರ್ಟ್, ಕಾಸ್ಟ್ ಆರ್ಟ್, ಫಿಂಗರ್ ಪಪ್ಪೆಟ್, ಫೇಸ್ ಮಾಸ್ಕ್, ಮಾರ್ಬೆಲ್ ಆರ್ಟ್ ಮುಂತಾದ ಚಟುವಟಿಕೆಗಳ ಕುರಿತು ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ.