ತಡರಾತ್ರಿ ತನಕ ವಿಚಾರಣೆ ನಡೆಸಿ ಮುಂಜಾನೆ ಆದೇಶ ನೋಡಿದ ಕೋರ್ಟ್
ನವದೆಹಲಿ: ಮುಂಬೈ ದಾಳಿಯ ಸಂಚುಕೋರ, 64 ವರ್ಷ ವಯಸ್ಸಿನ ತಹವುರ್ ರಾಣಾನನ್ನು ದೆಹಲಿಯ ವಿಶೇಷ ನ್ಯಾಯಾಲಯ 18 ದಿನಗಳ ಮಟ್ಟಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ವಶಕ್ಕೊಪ್ಪಿಸಿದೆ. ಅಮೆರಿಕದಿಂದ ಗಡಿಪಾರುಗೊಂಡಿದ್ದ ಉಗ್ರ ರಾಣಾನನ್ನು ಗುರುವಾರ ಸಂಜೆ 6.30ಕ್ಕೆ ಭಾರತಕ್ಕೆ ಕರೆತರಲಾಗಿತ್ತು.
ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವಿಶೇಷ ವಿಮಾನದಿಂದ ರಾಣಾನನ್ನು ಇಳಿಸಿದ ಕೂಡಲೇ ವಿಮಾನ ನಿಲ್ದಾಣದಲ್ಲೇ ಅವನ ಬಂಧನದ ಔಪಚಾರಿಕತೆಯನ್ನು ಪೂರೈಸಿ ಪಟಿಯಾಲ ಹೌಸ್‌ನ ಕೋರ್ಟ್‌ನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವೈದ್ಯಕೀಯ ಪರೀಕ್ಷೆ ಮತ್ತಿತರ ಪ್ರಕ್ರಿಯಗಳು ಮುಗಿದು ನ್ಯಾಯಾಲಯಕ್ಕೆ ಹಾಜರಪಡಿಸಿದ ಬಳಿಕ ಶುಕ್ರವಾರ ಮುಂಜಾನೆ ವೇಳೆಗೆ ನ್ಯಾಯಾಲಯ ಎನ್‌ಐಎ ಕಸ್ಟಡಿಗೊಪ್ಪಿಸುವ ತೀರ್ಪು ನೀಡಿತು.
2008ರ ನವಂಬರ್ 26ರಂದು ರಾತ್ರಿ ಮುಂಬಯಿ ಮೇಲಾದ ಭೀಕರ ಭಯೋತ್ಪಾದಕ ದಾಳಿಯ ಸೂತ್ರಧಾರ ತಹಾವುರ್ ರಾಣಾ. 26/11 ಭಯೋತ್ಪಾದಕ ದಾಳಿ ಎಂದೇ ಅರಿಯಲ್ಪಡುವ ಈ ಕೃತ್ಯಕ್ಕೆ ಸಂಚು ಮಾಡಿದ, ಭಾರತದ ವಿರುದ್ಧ ಸಮರ ಸಾರಿದ, ಕೊಲೆ ಸೇರಿದಂತೆ ಹಲವು ಆರೋಪಗಳನ್ನು ತಹಾವುರ್ ರಾಣಾ ವಿರುದ್ಧ ಹೊರಿಸಲಾಗಿದೆ. ಕ್ರಿಮಿನಲ್ ಪಿತೂರಿ, ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರುವುದು, ಕೊಲೆ ಮತ್ತು ನಕಲಿ ದಾಖಲೆ ಸೃಷ್ಟಿ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಭಯೋತ್ಪಾದಕ ರಾಣಾನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಈ ಜೈಲಿಗೆ ಭಾರಿ ಭದ್ರತೆಯ ಏರ್ಪಾಡು ಮಾಡಿದ್ದು, ಕೆಲವೇ ಮಂದಿಗೆ ಮಾತ್ರ ರಾಣಾ ಇರುವ ಸೆಲ್‌ಗೆ ಹೋಗಲು ಅವಕಾಶವಿದೆ. ದೆಹಲಿಯ ವಿಚಾರಣೆ ಮುಗಿದ ಬಳಿಕ ಅಂತಿಮ ವಿಚಾರಣೆ ಎದುರಿಸಲು ಮುಂಬೈಗೆ ಸ್ಥಳಾಂತರಿಸಬಹುದು ಎಂದು ಮೂಲಗಳು ತಿಳಿಸಿವೆ. ದೆಹಲಿಯ ಎನ್‌ಐಎ ಕೇಂದ್ರ ಕಚೇರಿಯಲ್ಲಿ ರಾಣಾನ ವಿಚಾರಣೆಗಾಗಿ ವಿಶೇಷ ಸೆಲ್ ರಚಿಸಲಾಗಿದೆ. ಕೇವಲ 12 ಅಧಿಅಕರಿಗಳಿಗೆ ಮಾತ್ರ ಈ ಸೆಲ್‌ನೊಳಗೆ ಹೋಗಲು ಅನುಮತಿಯಿದೆ.