ಗಣಿ ಗುತ್ತಿಗೆಯಲ್ಲಿ 500 ಕೋ.ರೂ. ಕಿಕ್‌ಬ್ಯಾಕ್ ಪಡೆದ ಆರೋಪಕ್ಕೆ ಸ್ಪಷ್ಟನೆ ನೀಡಿದ ಸಿಎಂ
ಬೆಂಗಳೂರು: ಗಣಿ ಗುತ್ತಿಗೆ ನವೀಕರಣದಲ್ಲಿ 500 ಕೋ. ರೂ. ಕಿಕ್‌ಬ್ಯಾಕ್ ಪಡೆದಿರುವ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಗೊಂದಲಗಳನ್ನು ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ. ಇಂತಹ ಅಪಪ್ರಚಾರಗಳು ನಾನು ಅಧಿಕಾರಕ್ಕೆ ಬಂದಾಗಿನಿಂದಲೂ ನಡೆದುಕೊಂಡು ಬರುತ್ತಿದೆ. ಕೆಲವು ದುಷ್ಟಶಕ್ತಿಗಳು ರಾಜಭವನವನ್ನು ತಪ್ಪು ದಾರಿಗೆಳೆಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
2015ಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದ ಎಂಎಂಡಿಆರ್-1957 ಕಾಯ್ದೆಯಲ್ಲಿ ನವೀಕರಣವು 20 ವರ್ಷಗಳ ಅವಧಿಗೆ ಅನ್ವಯವಾಗುತ್ತಿತ್ತು. ಅದರ ಪ್ರಕಾರ ಸರ್ಕಾರ ಗಣಿ ಗುತ್ತಿಗೆಯ ನವೀಕರಣಕ್ಕೆ ಫಾರೆಸ್ಟ್ ಕ್ಲಿಯರೆನ್ಸ್ ಪಡೆದುಕೊಳ್ಳುವ ಸಲುವಾಗಿ ಮಾತ್ರ ಷರತ್ತುಬದ್ಧ ತಾತ್ವಿಕ ಅನುಮೋದನೆ ನೀಡಿದೆ. 2015ರ ಜ.12 ರಂದು ಕೇಂದ್ರ ಸರ್ಕಾರವು ಎಂಎಂಡಿಆರ್ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿಯನ್ನು ತಂದ ಕಾರಣ ವಿವಿಧ ಹಂತದ ಪರಿಶೀಲನೆಗಳನ್ನು ನಡೆಸಿ, 2015ರ ಫೆ.9ಕ್ಕೆ ಗಣಿ ಗುತ್ತಿಗೆ ನವೀಕರಣಕ್ಕಾಗಿ ನೀಡಿದ್ದ ಷರತ್ತುಬದ್ಧ 8 ಕಂಪನಿಗಳ ತಾತ್ವಿಕ ಅನುಮತಿ ಪತ್ರಗಳು ಊರ್ಜಿತವಲ್ಲ ಎಂದು ತೀರ್ಮಾನಿಸಿ ಅವುಗಳನ್ನು ರದ್ದುಪಡಿಸಿ ತಿದ್ದುಪಡಿ ಕಾಯ್ದೆಯಂತೆ ಕ್ರಮವಹಿಸಲು ಸೂಚಿಸಲಾಯಿತು ಎಂದು ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ ಗೌಡ ಎಂಬವರು ನಿನ್ನೆ ಗಣಿ ಗುತ್ತಿಗೆಯಲ್ಲಿ ಸಿದ್ದರಾಮಯ್ಯನವರಿಗೆ ಸುಮಾರು 500 ಕೋ. ರೂ. ಸಂದಾಯವಾಗಿದ್ದು, ಇದರ ಕುರಿತು ತನಿಖೆಯಾಗಬೇಕೆಂದು ಆಗ್ರಹಿಸಿ ರಾಜ್ಯಪಾಲ ಥಾವ್‌ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆಯುವುದರೊಂದಿಗೆ ಹೊಸ ಹಗರಣ ಸಿದ್ದರಾಮಯ್ಯನವಿಗೆ ಸುತ್ತಿಕೊಂಡಿದೆ.
ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ದೂರುದಾರರ ಜೊತೆ ರಾಜ್ಯಪಾಲರು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ದೂರಿನ ಮೇಲೆ ಸಹಿ ಮಾಡಿ ಕಾನೂನು ವಿಭಾಗದ ಅಭಿಪ್ರಾಯಕ್ಕೆ ಕಳಿಸಿದ್ದಾರೆ. ಸಾಲಿಸಿಟರ್ ಜನರಲ್ ಬಳಿ ಚರ್ಚೆ ನಡೆಸಿ ತೀರ್ಮಾನ ಮಾಡುವುದಾಗಿ ತಿಳಿದ್ದಾರೆ. ಅಲ್ಲದೆ, ದಾಖಲೆ ಪರಿಶೀಲಿಸಿ ವರದಿ ನೀಡಲು ಸಾಲಿಸಿಟರ್ ಜನರಲ್‌ಗೆ ತಿಳಿಸಿದ್ದಾರೆ.
ಗಣಿ ಗುತ್ತಿಗೆ ನೀಡುವಾಗ 8 ಕಂಪನಿಗಳಿಂದ ಸಿದ್ದರಾಮಯ್ಯ ಲಂಚ ಪಡೆದುಕೊಂಡಿದ್ದಾರೆ. ಈ ಪೈಕಿ ಒಂದು ಕಂಪನಿಯ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದೆ. 2015ರಲ್ಲಿ 8 ಗಣಿ ಗುತ್ತಿಗೆ ನವೀಕರಣ ಮಾಡಲಾಗಿದೆ. ಹರಾಜು ಮೂಲಕ ಗಣಿ ಹಂಚಿಕೆ ಮಾಡಬೇಕೆಂಬ ಕೇಂದ್ರದ ನೀತಿಯನ್ನು 2,386 ಎಕರೆ ಭೂಮಿಯನ್ನು 8 ಕಂಪೆನಿಗಳಿಗೆ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
10 ವರ್ಷಗಳ ನಂತರ ಈ ಪ್ರಕರಣವನ್ನು ರಾಜಕೀಯ ದುರುದ್ದೇಶದಿಂದ ಜಗಿಯಲು ಪ್ರಾರಂಭಿಸಿದ್ದಾರೆ. ಹುರುಳಿಲ್ಲದ ವಿಷಯಕ್ಕೆ ವಿಷ ತುಂಬಿ ನಾಡಿನ ಜನರ ಮೆದುಳನ್ನು ಕಲುಷಿತಗೊಳಿಸಲು ಹೊರಟಿರುವ ದುಷ್ಟ ರಾಜಕೀಯ ಪಿತೂರಿಗಳನ್ನು ನಾಡಿನ ಪ್ರಜ್ಞಾವಂತ ಜನ ನಂಬಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.