ಧಾರ್ಮಿಕ ವಾತಾವರಣಕ್ಕೆ ಅಪಚಾರವಾಗುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ಪುತ್ತಿಗೆ ಮಠ ನಿರ್ಧಾರ
ಉಡುಪಿ : ಈಗ ಪ್ರಿವೆಡ್ಡಿಂಗ್ ಫೋಟೊಶೂಟ್ ಬಹಳ ಜನಪ್ರಿಯವಾಗಿದೆ. ಮದುವೆಗೆ ಮುಂಚಿತವಾಗಿ ಬೇರೆ ಬೇರೆ ತಾಣಗಳಿಗೆ ಹೋಗಿ ಭಾವಿ ಪತಿ-ಪತ್ನಿಯರು ನಾನಾ ಭಂಗಿಗಳಲ್ಲಿ ಫೊಟೊ ತೆಗೆಸಿಕೊಂಡು, ವೀಡಿಯೊ ಮಾಡಿಕೊಂಡು ಸಂಭ್ರಮಿಸುವುದು ಸಾಮಾನ್ಯವಾಗುತ್ತಿದೆ. ಇದಕ್ಕಾಗಿ ಲಕ್ಷಗಟ್ಟಲೆ ಖರ್ಚು ಮಾಡುವವರು ಇದ್ದಾರೆ. ಹಾಗೆಯೇ ಫೋಟೊಶೂಟ್ ಮಾಡಿಸಿಕೊಳ್ಳಲು ಬೇರೆ ಬೇರೆ ತಾಣಗಳನ್ನು ಹುಡುಕಾಡಿಕೊಂಡು ಹೋಗುತ್ತಾರೆ. ಈಗ ಪವಿತ್ರ ಧಾರ್ಮಿಕ ಸ್ಥಳವಾಗಿರುವ ಉಡುಪಿಯ ಕೃಷ್ಣ ಮಠದ ಪರಿಸರವೂ ಇಂಥ ತಾಣವಾಗುತ್ತಿರುವುದು ಇಲ್ಲಿನ ಆಸ್ತಿಕ ಭಕ್ತರಿಗೆ ಬಹಳ ಮುಜುಗರ ಉಂಟು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೃಷ್ಣ ಮಠದ ರಥಬೀದಿಯ ಆವರಣದ ವ್ಯಾಪ್ತಿಯಲ್ಲಿ ಪ್ರಿವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೊಶೂಟ್ ನಿಷೇಧಿಸಲು ಪರ್ಯಾಯ ಪುತ್ತಿಗೆ ಮಠ ನಿರ್ಧರಿಸಿದೆ. ಬೆಳ್ಳಂಬೆಳಗ್ಗೆ ಹಾಗೂ ಸ್ವಾಮೀಜಿಗಳ ಓಡಾಟದ ವೇಳೆ ಮುಜುಗರದ ಸನ್ನಿವೇಶದ ಸೃಷ್ಟಿಯಾಗುವುದನ್ನು ತಪ್ಪಿಸುವುದಕ್ಕಾಗಿ ಮಠ ಈ ನಿರ್ಧಾರಕ್ಕೆ ಬಂದಿದೆ.
ಕೃಷ್ಣ ಮಠದ ರಥಬೀದಿ ಪಾರಂಪರಿಕ ಕಟ್ಟಡಗಳು ಇರುವ ಜಾಗ. ಪ್ರಿವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೊಶೂಟ್ ಹೆಸರಿನಲ್ಲಿ ಬೆಳ್ಳಂಬೆಳಗ್ಗೆ ಮಠದ ಆವರಣದಲ್ಲಿ ಅಸಭ್ಯ ವರ್ತನೆ ಕಾಣಿಸುತ್ತಿದೆ. ಫೋಟೊಶೂಟ್ ನೆಪದಲ್ಲಿ ರಥಬೀದಿಯಲ್ಲಿ ಅನಪೇಕ್ಷಿತ ವರ್ತನೆ ನಡೆಯುತ್ತಿದೆ. ಕೇರಳ ಮತ್ತು ಬೆಂಗಳೂರು ಕಡೆಯಿಂದ ಬರುವ ಫೋಟೊಗ್ರಾಫರ್ಸ್ ಹಾವಳಿ ಹೆಚ್ಚಾಗಿದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.
ಅಷ್ಟಮಠಾಧೀಶರು ಓಡಾಡುವ ರಥಬೀದಿ ಇದು. ನೂರಾರು ವರ್ಷಗಳಿಂದ ಯತಿಗಳು, ದಾಸರು ನಡೆದಾಡಿದ ಬೀದಿ. ಇದಕ್ಕೆ ತನ್ನದೇ ಆದ ಪಾವಿತ್ರ್ಯವಿದೆ. ಪ್ರತಿದಿನ ರಥ ಬೀದಿಯಲ್ಲಿ ಉತ್ಸವ ನಡೆಯುತ್ತದೆ. ಅಷ್ಟೇ ಅಲ್ಲದೆ ಇದು ಅಷ್ಟಮಠಗಳು ಇರುವ ರಥಬೀದಿ. ಇಲ್ಲಿ ಜೋಡಿಹಕ್ಕಿಗಳು ಸರಸ ಸಲ್ಲಾಪ ನಡೆಸುವುದು ಸರಿಯಲ್ಲ. ಹಾಗೆ ಮಾಡುವುದರಿಂದ ಧಾರ್ಮಿಕ ವಾತಾವರಣಕ್ಕೆ ಅಡ್ಡಿ ಆಗುತ್ತದೆ. ಹೀಗಾಗಿ ಮುಜುಗರದ ಸನ್ನಿವೇಶ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಠ ತಿಳಿಸಿದೆ.
ವಿವಿಧ ಊರುಗಳಿಂದ ಬರುವ ಫೋಟೊಗ್ರಾಫರ್‌ಗಳು, ಜೋಡಿಗಳು ವೆಡ್ಡಿಂಗ್ ಫೋಟೊಶೂಟ್ ಹೆಸರಿನಲ್ಲಿ ರಥಬೀದಿಯಲ್ಲೇ ಸಲ್ಲಾಪ ಮಾಡುತ್ತಾರೆ. ಇದೊಂತರ ವಿರೋಧಾಭಾಸವಾಗಿ ಕಾಣಿಸುತ್ತಿದೆ. ಒಂದೆಡೆ ಧಾರ್ಮಿಕ ಪ್ರಜ್ಞೆ ವೃದ್ಧಿಸುತ್ತಿದ್ದರೆ, ಮತ್ತೊಂದೆಡೆ ಅದಕ್ಕೆ ತದ್ವಿರುದ್ಧವಾದ ವಾತಾವರಣಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹೆಚ್ಚಾಗಿ ಕಠಿಣ ಕ್ರಮ ಕೈಗೊಳ್ಳಬೇಕಾಯಿತು ಎಂದು ಮಠದ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.