ಪುತ್ತೂರು : ಅಕ್ಷಯ ಕಾಲೇಜಿನಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳನ್ನು ಒಳಗೊಂಡ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ “ಕೃತ್ವ 2025” ನ್ನು ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಪರೀಕ್ಷಾಂಗ ಕುಲಸಚಿವರಾದ ಡಾ. ಶ್ರೀಧರ್ ಹೆಚ್.ಜಿ., ಉದ್ಘಾಟಿಸಿದರು.
ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಪರೀಕ್ಷಾಂಗ ಕುಲಸಚಿವರಾದ ಡಾ. ಶ್ರೀಧರ್ ಹೆಚ್.ಜಿ., ಮಾತನಾಡಿ, ಮಾನವ ಜೀವನದ ಅತ್ಯಂತ ಶ್ರೇಷ್ಠವಾದ ಸಂಪತ್ತು ಅಂದರೆ ಅದು ವಿದ್ಯೆ. ವಿದ್ಯೆಯು ಕಾಮಧೇನುವಿಗೆ ಸಮಾನ. ವಿದ್ಯೆಯಿಂದ ನಾವು ಏನನ್ನು ಬಯಸುತ್ತೇವೆಯೋ ಅದನ್ನು ಪಡೆಯುವ ಅಗಾಧ ಶಕ್ತಿಯನ್ನು ಅದು ಹೊಂದಿದೆ ಮತ್ತು ಯಾರಿಂದಲೂ ಅಪಹರಣಕ್ಕೆ ಒಳಪಡದ ಏಕೈಕ ಸಂಪತ್ತು. ಭೌತಿಕ ಪ್ರಪಂಚದದಲ್ಲಿ ಸಿಗುವ ಸುಖ, ಭೋಗಗಳು ಮುಂಜಾನೆಯ ಹೊತ್ತು ಕರಿಕೆ ಹುಲ್ಲಿನ ತುದಿಯಲ್ಲಿ ಕಂಡು ಬರುವ ಮುತ್ತಿನ ಹರಳಿನಂತಿರುವ ಇಬ್ಬನಿಯು ರವಿಯ ಕಿರಣಗಳು ಬಿದ್ದಾಗ ಹೇಗೆ ಆವಿಯಾಗುತ್ತದೊ ಅದೇ ರೀತಿ ಕ್ಷಣಿಕ ಆದರೆ ವಿದ್ಯೆಯು ಶಾಶ್ವತ ನೆಮ್ಮದಿಯನ್ನು ತರಬಲ್ಲ ಅಸ್ತ್ರ ಎಂದು ವಿದ್ಯೆಯ ಬಗ್ಗೆ ಕನ್ನಡ ಕವಿ, ಕವಯತ್ರಿಯರ , ವಚನ ಸಾಹಿತ್ಯಕಾರರ ವರ್ಣನೆಯ ಮಹತ್ವವನ್ನು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಅಧ್ಯಕ್ಷರಾದ ಜಯಂತ್ ನಡುಬೈಲ್ ಮಾತನಾಡಿ, ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಜೀವನ ಯಶಸ್ವಿಗೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜೀವನದ ಉನ್ನತಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ ಪಕ್ಕಳ ಮಾತನಾಡಿ, ಸೋಲೆ ಗೆಲುವಿನ ಸೋಪಾನ ಎಂಬಂತೆ ಮರಳಿ ಯತ್ನವನ್ನು ಮಾಡುತ್ತಾ ಗುರಿ ತಲುಪುವ ತನಕ ಧೃತಿಗೆಡ ಬಾರದು, ಎದೆಗುಂದ ಬಾರದು. ಪ್ರತಿ ಸೋಲು ಒಂದೊಂದು ಪಾಠ , ಶಿಸ್ತಿನಿಂದ ಮುನ್ನಡೆಯ ಬೇಕು ಎಂದು ತಿಳಿಸಿದರು.
ಸಾಂಸ್ಕೃತಿಕ ಸ್ಪರ್ಧೆ “ಕೃತ್ವ 2025” ಸಂಚಾಲಕರಾದ ಕನ್ನಡ ವಿಭಾಗದ ಉಪನ್ಯಾಸಕ ಹರಿಶ್ಚಂದ್ರ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್, ಆಡಳಿತಾಧಿಕಾರಿ ಅರ್ಪಿತ್ ಟಿ. ಎ. ಮತ್ತು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಜೀವನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕುಮಾರಿ ಪ್ರಕೃತಿ ಪ್ರಾರ್ಥನೆ ಹಾಡಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿ ಕುಮಾರಿ ಪೂಜಿತಾ ಸ್ವಾಗತಿಸಿ, ಸಹ ಖಜಾಂಚಿ ಟೀನಾ ವಂದಿಸಿದರು.