ಬೆಂಗಳೂರು: ಗ್ಯಾಸ್ ಕಟ್ಟರ್ ಬಳಸಿ ಎಟಿಎಂನ್ನು ಕತ್ತರಿಸಿ 18 ಲ.ರೂ. ಕಳ್ಳತನ ಮಾಡಿದ ಘಟನೆ ಇಂದು ನಸುಕಿನ ಹೊತ್ತು ಕಲಬುರಗಿ ನಗರದಲ್ಲಿ ಸಂಭವಿಸಿದೆ. ಕಲಬುರಗಿಯ ರಾಮನಗರದ ಬಳಿ ಇರುವ ಎಸ್‌ಬಿಐ ಎಟಿಎಂನಿಂದ ಕಳ್ಳರು ಹಣ ದೋಚಿದ್ದಾರೆ.
ಮಂಗಳವಾರ ಸಂಜೆ 3 ಗಂಟೆಗೆ ಬ್ಯಾಂಕ್ ಸಿಬ್ಬಂದಿ ಎಟಿಎಂಗೆ ಹಣ ತುಂಬಿಸಿದ್ದರು. ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಎಟಿಎಂನಲ್ಲಿ ಸೆಕ್ಯೂರಿಟಿ ಇಲ್ಲದನ್ನು ಗಮನಿಸಿದ ಖದೀಮರು ಕನ್ನ ಹಾಕಿದ್ದಾರೆ. ಎಟಿಎಂನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಿಗೆ ಬ್ಲಾಕ್ ಸ್ಪ್ರೇ ಮಾಡಿ ಗ್ಯಾಸ್ ಕಟ್ಟರ್‌ನಿಂದ ಎಟಿಎಂ ಮಷಿನ್‌ನ ಮುಂಭಾಗವನ್ನು ಕತ್ತರಿಸಿ ತೆಗೆದಿದ್ದಾರೆ. ಬಳಿಕ ಎಟಿಎಂನಲ್ಲಿದ್ದ 18 ಲಕ್ಷ ರೂ. ಹಣವನ್ನು ಎಗರಿಸಿದ್ದಾರೆ.
ಕಳ್ಳರು ಐ20 ಕಾರಿನಲ್ಲಿ ಬಂದು ಎಟಿಎಂ ದರೋಡೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಎಟಿಎಂನ ಬಳಿ ಐ20 ಕಾರು ನಿಂತಿರುವ ದೃಶ್ಯವು ಎಟಿಎಂ ಪಕ್ಕದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.