ಪುತ್ತೂರು : ರಾಜ್ಯಸರಕಾರ ಸರಕಾರಿ ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಶೇ.4 ಮೀಸಲಾತಿ ನೀಡಿರುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ವತಿಯಿಂದ ಪ್ರತಿಭಟನಾ ಸಭೆ ಮಂಗಳವಾರ ದರ್ಬೆ ವೃತ್ತದ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ವಿಶ್ವ ಹಿಂದೂ ಪರಿಷತ್ ರಾಜ್ಯ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಒಂದೆಡೆ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ, ರಾಜ್ಯದ ಜನತೆಗೆ ಜಾತಿ-ಮತ ಬೇಧವಿಲ್ಲದೆ ಎಲ್ಲರಿಗೂ ಸಮಪಾಲು ಎಂದು ಹೇಳುತ್ತಿದ್ದು, ಇನ್ನೊಂದೆಡೆ ಮುಸಲ್ಮಾನರನ್ನು ಓಲೈಕೆ ಮಾಡಲು ಸರಕಾರಿ ಗುತ್ತಿಗೆಯಲ್ಲಿ ಶೇ.4 ಮೀಸಲಾತಿ ನೀಡಿ ಹಿಂದುಳಿದ ವರ್ಗದವರಿಗೆ ವಂಚನೆ ಮಾಡುತ್ತಿರುವುದು ಖಂಡನೀಯ. ಈಗಾಗಲೇ ಹಿಂದುಳಿದ ವರ್ಗಗಳಲ್ಲಿ ಮುಸ್ಲಿಂರು ಮೀಸಲಾತಿಯನ್ನು ಪಡೆದಿದ್ದಾರೆ. ಈ 4 ಶೇ. ಮೀಸಲಾತಿ ವಿಧೇಯಕವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ನೂರಾರು ಕಾಮಗಾರಿ ನಡೆಯುತ್ತಿದೆ. ಗುತ್ತಿಗೆಯಲ್ಲಿ ಶೇ.41 ಮೀಸಲಾತಿ ಈಗಾಗಲೇ ಇದೆ. ಉಳಿದ 55 ಶೇ. ಎಲ್ಲರಿಗೂ ಇದೆ. ಹಿಂದುಳಿದ ವೆರ್ಗವಲ್ಲದೆ ಮುಸಲ್ಮಾನರೂ ಇದ್ದಾರೆ. ಇವೆಲ್ಲವನ್ನು ಬದಿಗಿಟ್ಟು 4ಶೇ. ಮೀಸಲಾತಿ ನೀಡುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದ್ದು, ಹಿಂದುಳಿದ ವರ್ಗದ ಗುತ್ತಿಗೆದಾರರಿಗೆ ಮಾಡುವ ಬಹುದೊಡ್ಡ ವಂಚನೆಯಾಗಿದೆ. ಇದನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದ ಅವರು, ದೇಶದಲ್ಲಿ ಹಿಂದೂ ವಿರೋಧಿ, ದೇಶ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಹಿಂದುಗಳನ್ನು ದಮನಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಈ ವಿಧೇಯಕದ ವಿರುದ್ಧ ಮುಂದಿನ ದಿನಗಳಲ್ಲಿ ಕಾನೂನು ಹೋರಾಟವನ್ನೂ ನಾವು ಮಾಡಲಿದ್ದೇವೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಮುಖಂಡರಾದ ಮುರಳೀಕೃಷ್ಣ ಹಸಂತಡ್ಕ, ವಿಶ್ವ ಹಿಂದೂ ಪರಿಷತ್ ನ ಭರತ್ ಕುಮ್ಡೇಲು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಸ್ವಾಗತಿಸಿದರು. ವಿಶಾಖ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ಪದಾಧಿಕಾರಿಗಳು, ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.