ಪುತ್ತೂರು : ಸಮಾಜ ಕಲ್ಯಾಣ ಸಂಸ್ಥೆ ಬೆಂಗಳೂರು, ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಏ.6 ರಂದು ಬೆಂಗಳೂರಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಪುತ್ತೂರು ಬಲ್ನಾಡು ನಿವಾಸಿ ಶ್ರುತಿ ವಿಸ್ಮಿತ್ ರವರಿಗೆ ರಾಷ್ಟ್ರೀಯ ವೀರ ವನಿತೆ ಯಕ್ಷಗಾನ ಕಲಾ ರತ್ನ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಪ್ಪಿನಂಗಡಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿರುವಾಗ ಕಲಾವಿದ ಪಾತಾಳ ಅಂಬಾ ಪ್ರಸಾದ್ ಅವರಿಂದ ಯಕ್ಷಗಾನದ ಹೆಜ್ಜೆಗಾರಿಕೆಯ ಅಭ್ಯಾಸ, ಮುಂದಕ್ಕೆ ಕಲಾವಿದ ಲಕ್ಷ್ಮಣ ಆಚಾರ್ಯ ಎಡಮಂಗಲ ಇವರ ಮಾರ್ಗದರ್ಶನದಲ್ಲಿ ಪರಿಣತಿ ಪಡೆದು ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಹಂಬಲದಿಂದ ವಿವಿಧ ಯಕ್ಷಗಾನ ಸಂಘ ಸಂಸ್ಥೆಗಳ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾ ಪುಂಡು ವೇಷ, ಸ್ತ್ರೀ ವೇಷ, ಕಿರೀಟವೇಷ, ಹಾಸ್ಯ ಪಾತ್ರಗಳು, ಬಣ್ಣದ ವೇಷ (ಮಹಿಷಾಸುರ ಸಹಿತ ) ನಿರ್ವಹಿಸುತ್ತಾ ಬಂದಿದ್ದಾರೆ. ಆಹ್ವಾನಿತ ಕಲಾವಿದರಾಗಿ ತೆಂಕು, ಬಡಗಿನ ಪ್ರಸಿದ್ಧ ಕಲಾವಿದರ ಯಕ್ಷಗಾನ ಪ್ರದರ್ಶನಗಳಲ್ಲಿಯೂ ಭಾಗವಹಿಸುವ ಅವಕಾಶವನ್ನು ಪಡೆದಿದ್ದಾರೆ.
ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ವಾರದ ತಾಳಮದ್ದಳೆ ಕೂಟಗಳಲ್ಲಿ ಅರ್ಥಧಾರಿಯಾಗಿ ಭಾಗವಹಿಸುತ್ತಿರುವ ಇವರು ಜಿಲ್ಲೆಯಾದ್ಯಂತ ಹಲವಾರು ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸಿ ಉತ್ತಮ ಮಾತುಗಾರರಾಗಿಯೂ ಗುರುತಿಸಿಕೊಂಡಿದ್ದಾರೆ.
ವೃತ್ತಿ ಜೀವನ ಮತ್ತು ಸಾಂಸಾರಿಕ ಜೀವನದ ಜವಾಬ್ದಾರಿಯೊಂದಿಗೆ ಇವರ ಯಕ್ಷಗಾನದ ತುಡಿತ ಮೆಚ್ಚಬೇಕಾದ ವಿಚಾರವಾಗಿದೆ. ಈಗಾಗಲೇ ಹಲವಾರು ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿರುವ ಶ್ರುತಿ ವಿಸ್ಮಿತ್ ಭವಿಷ್ಯದಲ್ಲಿ ಉತ್ತಮ ಕಲಾವಿದರಾಗಿ ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆಯನ್ನು ನೀಡುವ ಸಾಮರ್ಥ್ಯ ಹೊಂದಿದ್ದಾರೆ.