ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಯಕ್ಷಗಾನದ ಕಥೆಯೇ ಸಿನಿಮಾ ಆದ ಚಿತ್ರ
ಉಡುಪಿ: ಸುಮಾರು ಕಲಾವಿದರು ನಟಿಸಿರುವ, ಹಿರಿಯ ನಟ ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿರುವ ಯಕ್ಷಗಾನವೇ ಕಥಾವಸ್ತು ಆಗಿ ಉಳ್ಳ ಸಿನಿಮಾವೊಂದು ಕನ್ನಡದಲ್ಲಿ ನಿರ್ಮಾಣವಾಗಿದ್ದು, ಏ.18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಮೊದಲು ಯಕ್ಷಗಾನ ಮತ್ತು ಯಕ್ಷಗಾನದ ಪಾತ್ರಗಳನ್ನು ಸಾಂದರ್ಭಿಕವಾಗಿ ಬಳಸಿಕೊಂಡಿರುವ ಅನೇಕ ಚಿತ್ರಗಳು ಬಂದಿವೆ. ಆದರೆ ಯಕ್ಷಗಾನ ಪ್ರಸಂಗವೊಂದನ್ನೇ ಸಿನಿಮಾ ಮಾಡಿ ಅದರಲ್ಲಿ ಯಕ್ಷಗಾನ ಕಲಾವಿದರೇ ನಟಿಸಿದ್ದು, ಇದೇ ಮೊದಲು. ಈ ಚಿತ್ರವನ್ನು ನಿರ್ದೇಶಿಸಿದವರು ಈಗಾಗಲೇ ಕನ್ನಡದಲ್ಲಿ ಸಂಗೀತ ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡಿರುವ ನಿರ್ದೇಶಕ ರವಿ ಬಸ್ರೂರು. ಯಕ್ಷಗಾನವೇ ಸಿನಿಮಾ ಆಗಿರುವ ಕಾರಣ ಈ ಚಿತ್ರ ಬಹಳಷ್ಟು ಕುತೂಹಲ ಕೆರಳಿಸಿದೆ. ಯಕ್ಷಗಾನದ ನೆಲೆವೀಡಾಗಿರುವ ಕರಾವಳಿಯಲ್ಲಂತೂ ಯಕ್ಷಗಾನದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ.
ಯಕ್ಷಗಾನವನ್ನು ಸಿನಿಮಾ ಮಾಡಬೇಕೆನ್ನುವುದು ದಶಕಗಳ ಕನಸಾಗಿತ್ತು. ಕರಾವಳಿ ಕರ್ನಾಟಕದ ಸಮೃದ್ಧ ಸಾಂಸ್ಕೃತಿಕ ಕಲೆ ಮತ್ತು ಪರಂಪರೆಯನ್ನು ಇಡೀ ಜಗಗೆ ಪರಿಚಯಿಸಬೇಕು ಎಂಬ ನಿಟ್ಟಿನಲ್ಲಿ ಈ ಸಿನಿಮಾ ಮಾಡಿರುವುದಾಗಿ ರವಿ ಬಸ್ರೂರು ಹೇಳಿಕೊಂಡಿದ್ದಾರೆ.
70 ಹಾಡುಗಳು
ಸಾಮಾನ್ಯವಾಗಿ ಚಿತ್ರವೊಂದರಲ್ಲಿ ನಾಲ್ಕೈದು ಹಾಡು ಇರುತ್ತದೆ, ಹೆಚ್ಚೆಂದರೆ ಏಳೆಂಟು ಹಾಡುಗಳು ಇರಬಹುದು. ಆದರೆ ವೀರ ಚಂದ್ರಹಾಸ ಚಿತ್ರದಲ್ಲಿ ಬರೋಬ್ಬರಿ 70 ಹಾಡುಗಳಿವೆ. ಇವೆಲ್ಲ ಯ್ಷಗಾನದ್ದೇ ಹಾಡುಗಳಾಗಿದ್ದು, ಐವರು ಭಾಗವತರು ಹಾಡಿದ್ದಾರೆ.

ದೊಂದಿ ಬೆಳಕಿನ ಅಂದ
ಇಡೀ ಚಿತ್ರವನ್ನು ದೊಂದಿ ಮತ್ತು ಪಂಜಿನಬೆಳಕಿನಲ್ಲಿ ವಿತ್ರೀಕರಿಸಿಕೊಳ್ಳಲಾಗಿದೆ. ವಿದ್ಯುತ್ ದೀಪಗಳು ಬರುವ ಮೊದಲು ಯಕ್ಷಗಾನಗಳು ದೊಂದಿ ಬೆಳಕಿನಲ್ಲೇ ನಡೆಯುತ್ತಿದ್ದವು. ಈಗ ದೊಂದಿ ಬೆಳಕಿನ ಯಕ್ಷಗಾನ ಪ್ರಯೋಗಕ್ಕೆ ಮಾತ್ರ ಸೀಮಿತವಾಗಿದೆ. ಈ ಹಿನ್ನೆಲೆಯಲ್ಲಿ ಯಕ್ಷಗಾನದ ಸಂಪ್ರದಾಯವನ್ನು ಗಮನದಲ್ಲಿಟ್ಟುಕೊಂಡು ಇಡೀ ಚಿತ್ರದಲ್ಲಿ ಯಕ್ಷಗಾನದ ಸನ್ನಿವೇಶಗಳೆಲ್ಲವನ್ನು ದೊಂದಿ ಬೆಳಕಿನಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ.
ಏಕಕಾಲದಲ್ಲಿ 500 ಕಲಾವಿದರು
ಕೆಲವು ಸನ್ನಿವೇಶಗಳಲ್ಲಿ ಏಕಕಾಲದಲ್ಲಿ 400-500 ಕಲಾವಿದರು ಕಾಣಿಸಿಕೊಳ್ಳಬೇಕಿತ್ತು. ಎಲ್ಲ ಕಲಾವಿದರನ್ನು ಯಕ್ಷಗಾನದ ಪರಂಪರೆಗೆ ಕಿಂಚಿತ್ತೂ ಧಕ್ಕೆಯಾಗದಂತೆ ಪ್ರಸ್ತುತಪಡಿಸಲಾಗಿದೆ. ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರರ ತಯಾರಾಗಿದೆ. ಈಗಿನ ಚಿತ್ರಗಳ ಬಜೆಟ್‌ಗೆ ಹೋಲಿಸಿದರೆ ಇದು ಕಡಿಮೆ ಎನಿಸಬಹುದು. ಆದರೆ ಚಿತ್ರದಲ್ಲಿ ಯಕ್ಷಗಾನದ ಶ್ರೀಮಂತ ಪರಂಪರೆ ಅನಾವರಣಗೊಂಡಿದೆ ಎನ್ನುವುದು ರವಿ ಬಸ್ರೂರು ಅನಿಸಿಕೆ.
ಒಂದು ಕಡೆ ಸೆಟ್ ಹಾಕಿ ಇಡೀ ಚಿತ್ರವನ್ನು ಚಿತ್ರೀಕರಿಸಲಾಗಿದೆ. 35 ದಿನದಲ್ಲಿ ಚಿತ್ರೀಕರಣ ಮುಗಿದಿದೆ.
ಜೈಮಿನ ಭಾರತದ ಕಥೆ
ಕುಮಾರವ್ಯಾಸನ ಜೈಮಿನಿ ಭಾರತದಲ್ಲಿರುವ ಚಂದ್ರಹಾಸನ ಕಥೆಯನ್ನು ಎತ್ತಿಕೊಂಡು ಚಿತ್ರಕಥೆ ಹೆಣೆಯಲಾಗಿದೆ. ಅಶ್ವಮೇಧ ಯಾಗದಲ್ಲಿ ಕುದುರೆಯನ್ನು ಕಟ್ಟಿ ಹಾಕುವಲ್ಲಿಂದ ಚಿತ್ರ ಶುರುವಾಗುತ್ತದೆ. ಮುಖ್ಯ ಪಾತ್ರಗಳೆಲ್ಲವನ್ನೂ ಯಕ್ಷಗಾನ ಕಲಾವಿದರೇ ನಿಭಾಯಿಸಿದ್ದಾರೆ. ಅತಿಥಿ ಪಾತ್ರಗಳು ಮತ್ತು ಕೆಲವು ವಿಶೇಷ ಪಾತ್ರಗಳಿಗೆ ಅನ್ಯ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಆದರೆ ಅವರ ಪಾತ್ರವೂ ಯಕ್ಷಗಾನದ ಚೌಕಟ್ಟಿನಲ್ಲೇ ಇದೆ ಎಂದು ರವಿ ಬಸ್ರೂರು ವಿವರಿಸಿದ್ದಾರೆ.

ಶಿವಣ್ಣ ಝಲಕ್
ಕನ್ನಡದ ಖ್ಯಾತ ನಟ ಶಿವರಾಜ್‌ಕುಮಾರ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಹೈಲೈಟ್. ಶಿವಪುಟ್ಟಸ್ವಾಮಿ ಎಂಬ ಪಾತ್ರದಲ್ಲಿ ಶಿವಣ್ಣ ನಟಿಸಿದ್ದಾರೆ. ಅಮೆರಿಕದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಂಡು ಮರಳಿದ ಬೆನ್ನಿಗೆ ಶೂಟಿಂಗ್‌ನಲ್ಲಿ ಭಾಗವಹಿಸಿ ತನ್ನ ಪಾತ್ರವನ್ನು ಪೂರ್ಣಗೊಳಿಸಿದ್ದಾರೆ. ಯಕ್ಷಗಾನ ವೇಷದಲ್ಲಿರುವ ಶಿವಣ್ಣನ ಚಿತ್ರಗಳು ಈಗಾಗಲೇ ಬಹಳ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.