ಹೂಡಿಕೆದಾರ ಪಾಲಿಗೆ ಇಂದು ಬ್ಲ್ಯಾಕ್ ಮಂಡೆ
ನವದೆಹಲಿ: ಜಾಗತಿಕ ಷೇರು ಮಾರುಕಟ್ಟೆಗಳ ಪಾಲಿಗೆ ಇಂದಿನ ದಿನ ಅಕ್ಷರಶಃ ಬ್ಲ್ಯಾಕ್ ಮಂಡೆಯಾಗಿ ಪರಿಣಮಸಿದೆ. ಮುಂಬಯಿ ಷೇರು ಮಾರುಕಟ್ಟೆಯೂ ಸೇರಿದಂತೆ ಎಲ್ಲ ಮಾರುಕಟ್ಟೆಗಳ ಸೂಚ್ಯಂಕ ಪಾತಾಳಕ್ಕಿಳಿದು ಷೇರು ಮಾರುಕಟ್ಟೆಯಲ್ಲಿ ಅಕ್ಷರಶಃ ರಕ್ತದೋಕುಳಿ ಆಗುತ್ತಿದೆ. ಯದ್ವಾತದ್ವಾ ಕರಡಿ ಕುಣಿತದಿಂದ ಹೂಡಿಕೆದಾರರು ಲಕ್ಷ ಕೋಟಿಗಳಲ್ಲಿ ಹಣ ಕಳೆದುಕೊಂಡು ತಲೆ ಮೇಲೆ ಕೈಹೊತ್ತು ಕೂರುವ ಸ್ಥಿತಿ ನಿರ್ಮಾಣವಾಗಿದೆ.
ಭಾರತದಲ್ಲಿ 23,000 ಗಡಿದಾಟಿ ಮುನ್ನುಗ್ಗುವ ಸೂಚನೆ ನೀಡಿದ್ದ ಷೇರು ಗೂಳಿ ಈಗ ಪ್ರಪಾತಕ್ಕೆ ಬೀಳುತ್ತಿದೆ. ಸೆನ್ಸೆಕ್ಸ್ನಲ್ಲೂ ಕೂಡ ರಕ್ತದೋಕುಳಿ ಆಗುತ್ತಿದೆ. ಬೆಳಗ್ಗೆ 11 ಗಂಟೆಯೊಳಗೆ ಶೇ. 3.77ರಷ್ಟು ಕುಸಿತವಾಗಿದೆ. ಬಿಎಸ್ಇ ಮತ್ತು ಎನ್ಎಸ್ಇನ ಬಹುತೇಕ ಎಲ್ಲ ಸೂಚ್ಯಂಕಗಳೂ ಕೂಡ ಕೆಂಪು ಬಣ್ಣದಲ್ಲಿವೆ. ಭಾರತ ಮಾತ್ರವಲ್ಲ, ಜಾಗತಿಕವಾಗಿ ಎಲ್ಲ ಷೇರು ಮಾರುಕಟ್ಟೆ ಕುಸಿತ ಕಾಣುತ್ತಿವೆ. ಕಳೆದ ಹತ್ತು ತಿಂಗಳಲ್ಲೆ ಕನಿಷ್ಠ ಹಂತಕ್ಕೆ ಕುಸಿದ ಪರಿಣಾಮವಾಗಿ ಷೇರುಮಾರುಕಟ್ಟೆ ಅಂದಾಜು 19 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.
ಅಮೆರಿಕ, ಯೂರೋಪ್ ಮತ್ತು ಏಷ್ಯಾದ ಎಲ್ಲ ಷೇರು ಮಾರುಕಟ್ಟೆಗಳೂ ಸೋಮವಾರ ತತ್ತರಿಸಿಹೋಗಿವೆ. ಹೂಡಿಕೆದಾರರು ಸಿಕ್ಕಾಪಟ್ಟೆ ನಷ್ಟ ಮಾಡಿಕೊಂಡಿದ್ದಾರೆ. ಬೇರೆ ಜಾಗತಿಕ ಮಾರುಕಟ್ಟೆಗಳಿಗೆ ಹೋಲಿಸಿದರೆ ಭಾರತದ ಸೆನ್ಸೆಕ್ಸ್, ನಿಫ್ಟಿ ಅನುಭವಿಸಿದ ನಷ್ಟ ಕಡಿಮೆ ಎಂದನಿಸುವಷ್ಟು ಬ್ಲಡ್ ಬಾತ್ ಆಗಿದೆ.
ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ತೆರಿಗೆ ಸುಂಕ ಸಮರ. ಅಮೆರಿಕ ಆರಂಭಿಸಿದ ಈ ಸುಂಕ ಸಮರ ಜಾಗತಿಕ ವಾಣಿಜ್ಯ ಮಹಾಯುದ್ಧವಾಗಿ ಪರಿಣಮಿಸಿದೆ. ಎಲ್ಲ ದೇಶಗಳ ಮೇಲೆ ಅಮೆರಿಕ ಸುಂಕ ಹೇರಿಕೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಬೇರೆ ಬೇರೆ ದೇಶಗಳೂ ಕೂಡ ಅಮೆರಿಕದ ಮೇಲೆ ಪ್ರತಿಸುಂಕ ವಿಧಿಸತೊಡಗಿವೆ. ಚೀನಾ, ಕೆನಡ, ಮೆಕ್ಸಿಕೊ, ಈಗ ಯೂರೋಪಿಯನ್ ಯೂನಿಯನ್ ಕೂಡ ಅಮೆರಿಕದ ವಿರುದ್ಧ ಟೊಂಕ ಕಟ್ಟಿ ನಿಂತಿವೆ. ಇದರ ನೇರ ಪರಿಣಾಮ ಜಾಗತಿಕ ಷೇರು ಮಾರುಕಟ್ಟೆ ಮೇಲಾಗಿದೆ.
ಸುಂಕ ಸಮರದಿಂದಾಗಿ ಜಾಗತಿಕವಾಗಿ ಮತ್ತೆ ಹಣದುಬ್ಬರ ಏರಿಕೆ ಆಗು ಸಾಧ್ಯತೆ ಗೋಚರಿಸಿದ ಪರಿಣಾಮವಾಗಿ ಷೇರುಗಳ ಬೆಲೆ ಕುಸಿಯತೊಡಗಿದೆ. ಇಸರಿಂಸ ಕಾರ್ಪೊರೇಟ್ ಕಂಪನಿಗಳ ಲಾಭ ಕಡಿಮೆ ಆಗಲಿದೆ. ಬೆಲೆ ಏರಿಕೆಯಿಂದಾಗಿ ಬಡ್ಡಿದರಗಳೂ ಹೆಚ್ಚಾಗಲಿವೆ. ಇದರಿಂದಾಗಿ ಷೇರು ಮಾರುಕಟ್ಟೆಯಿಂದ ಜನರು ಹೊರಬೀಳತೊಡಗಿದ್ದಾರೆ.