ಶಾಶ್ವತ ದೀಪಾಲಂಕಾರಕ್ಕೆ ಚಾಲನೆ-ವಾರದಲ್ಲಿ ಎರಡು ದಿನ ವೀಕ್ಷಣೆಗೆ ಲಭ್ಯ
ಬೆಂಗಳೂರು: ಆಡಳಿತ ಶಕ್ತಿಕೇಂದ್ರ ವಿಧಾನಸೌಧವಿನ್ನು ದೀಪಾಲಂಕಾರದಿಂದ ಜಗಮಗಿಸಲಿದೆ. ಹಿಂದೆಲ್ಲ ರಾಷ್ಟ್ರೀಯ ಹಬ್ಬಗಳು, ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿಧಾನಸೌಧಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗುತ್ತಿತ್ತು. ಈಗ ಸ್ಪೀಕರ್ ಯು.ಟಿ.ಖಾದರ್ ಮುತುವರ್ಜಿಯಿಂದ ವಿಧಾನಸೌಧಕ್ಕೆ ಶಾಶ್ವತ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ಇನ್ನು ಪ್ರತಿ ಶನಿವಾರ ಮತ್ತು ಭಾನುವಾರ ವರ್ಣರಂಜಿತ ವಿದ್ಯುತ್ ದೀಪಗಳಿಂದ ವಿಧಾನಸೌಧ ಕಂಗೊಳಿಸಲಿದೆ. ಶಾಶ್ವತ ವಿದ್ಯುತ್ ದೀಪಾಲಂಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ರಾತ್ರಿ ಚಾಲನೆ ನೀಡಿದ್ದಾರೆ. ಯುಟಿ ಖಾದರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ.ಪಾಟೀಲ್, ಜಾರ್ಜ್, ಮುಖ್ಯ ಕಾರ್ಯದರ್ಶಿ ಶಾಲಿನಿ ಉಪಸ್ಥಿತರಿದ್ದರು.

ವಿಧಾನಸೌಧಕ್ಕೆ ಶಾಶ್ವತ ದೀಪಾಲಂಕಾರ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಸಂಸತ್ತು, ವಿಧಾನಸೌಧ ಜನರ ಮತ್ತು ರಾಜ್ಯದ ಹಾಗೂ ದೇಶದ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ದೇಗುಲಗಳು. ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಮಾತನ್ನು ಪ್ರತಿಯೊಬ್ಬರೂ ಸಾರ್ಥಕಗೊಳಿಸುವ ರೀತಿಯಲ್ಲಿ ಕೆಲಸ ಮಾಡಿ ರಾಜ್ಯದ ಕಟ್ಟಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಬೇಕು ಎಂದು ಕರೆ ನೀಡಿದರು.
ಕಳೆದ ಒಂದು ತಿಂಗಳಲ್ಲಿ ಎಲ್ಲ ಭಾಗಗಳಲ್ಲೂ ಅಲಂಕಾರ ಮಾಡಲಾಗಿದೆ. ಸಾರ್ವಜನಿಕರ ವೀಕ್ಷಣೆಗೂ ಅವಕಾಶ ಮಾಡಿಕೊಡುತ್ತೇವೆ. ಮುಂದಿನ 5 ವರ್ಷಗಳ ಮೈಂಟೇನ್ ಮಾಡೋಕೆ ಷರತ್ತು ಹಾಕಲಾಗಿದೆ. ಈ ಹಿಂದೆ ಗಣರಾಜ್ಯೋತ್ಸವ, ಸ್ವಾತಂತ್ರ‍್ಯ ದಿನಾಚರಣೆ ಮಹತ್ವದ ದಿನಗಳಲ್ಲಿ ದೀಪಾಲಂಕಾರಕ್ಕೆ ಲಕ್ಷಾಂತರ ಖರ್ಚು ಆಗ್ತಾ ಇತ್ತು. ಹೀಗಾಗಿ ವ್ಯವಸ್ಥೆ ಮಾಡಿದ್ದು, ಮೈಸೂರು ಅರಮನೆ ರೀತಿ ಅಭಿವೃದ್ಧಿ ಮಾಡುತ್ತಾರೆ ಎಂಬ ನಂಬಿಕೆ ಇದೆ. ಟೀಂ ವರ್ಕ್ ಕೆಲಸ ಮಾಡಿ ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸುವ ಕೆಲಸವನ್ನ ಮಾಡ್ತೇವೆ ಎಂದು ಸಿಎಂ ಅಭಯ ನೀಡಿದರು.
ಶನಿವಾರ, ಭಾನುವಾರ, ವಿಶೇಷ ಸಂದರ್ಭದಲ್ಲಿ ವಿದ್ಯುತ್ ದೀಪಗಳನ್ನು ಹಾಕಲಾಗುತ್ತದೆ. ವಿಧಾನಸೌಧವನ್ನು ವಿದ್ಯುತ್ ದೀಪದಿಂದ ಅಲಂಕಾರ ಮಾಡಲು 1,063 ವಿದ್ಯುತ್ ದೀಪಗಳನ್ನು ಬಳಸಲಾಗಿದೆ. ಲೆಕ್ಸಾ ಲೈಟಿಂಗ್ಸ್ಗೆ ಶಾಶ್ವತ ವಿದ್ಯುತ್ ದೀಪಾಲಂಕಾರದ ಗುತ್ತಿಗೆ ನೀಡಲಾಗಿದೆ.