ವಕ್ಫ್‌ ಮಸೂದೆಗಿನ್ನು ಸುಪ್ರೀಂ ಕೋರ್ಟ್‌ ಅಗ್ನಿಪರೀಕ್ಷೆ

ಅಂಕಿತ ಹಾಕಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ : ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಬೀಳೂವುದರೊಂದಿಗೆ ಅದು ಈಗ ಕಾಯಿದೆಯಾಗಿ ಮಾರ್ಪಟ್ಟಿದೆ. ರಾಷ್ಟ್ರಪತಿಗಳ ಅಂಕಿತ ಪಡೆಯುವ ಮೊದಲು ವಕ್ಫ್ ಮಸೂದೆಯನ್ನು ಎರಡೂ ಸದನಗಳು ಅಂಗೀಕರಿಸಿದ್ದವು. ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಬಿಸಿ ವಾಗ್ವಾದ ನಡೆದ ಸುದೀರ್ಘ ಚರ್ಚೆಯ ನಂತರ ಶುಕ್ರವಾರ ಬೆಳಗ್ಗೆ ರಾಜ್ಯಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಯಿತು. ರಾಜ್ಯಸಭೆಯಲ್ಲಿ ಸುಮಾರು 14 ಗಂಟೆಗಳ ಕಾಲ ಈ ಮಸೂದೆಯ ಬಗ್ಗೆ ಚರ್ಚೆ ನಡೆದು, ಪರವಾಗಿ 128 ಮತಗಳು ಮತ್ತು ವಿರುದ್ಧವಾಗಿ 95 ಮತಗಳು ಚಲಾವಣೆಯಾಗಿ ನಂತರ ಅದನ್ನು ಅಂಗೀಕರಿಸಲಾಯಿತು. ಇದಕ್ಕೂ ಮೊದಲು, ಲೋಕಸಭೆಯು ಸುಮಾರು 12 ಗಂಟೆಗಳ ಚರ್ಚೆಯ ನಂತರ ಅದನ್ನು ಅಂಗೀಕರಿಸಿತ್ತು, ಇದರಲ್ಲಿ 288 ಮತಗಳು ಪರವಾಗಿ ಮತ್ತು 232 ಮತಗಳು ವಿರುದ್ಧವಾಗಿ ಚಲಾವಣೆಯಾಗಿದ್ದವು.

ಉಭಯ ಸದನಗಳಲ್ಲಿ ಮಸೂದೆಯ ಮೇಲಿನ ಚರ್ಚೆಯ ಸಮಯದಲ್ಲಿ, ವಿರೋಧ ಪಕ್ಷಗಳು ಬಲವಾದ ಆಕ್ಷೇಪಣೆಗಳನ್ನು ಎತ್ತಿದ್ದವು, ಅವು ಮಸೂದೆಯನ್ನು ಮುಸ್ಲಿಂ ವಿರೋಧಿ ಮತ್ತು ಸಂವಿಧಾನಬಾಹಿರ ಎಂದು ಕರೆದವು, ಆದರೆ ಸರ್ಕಾರ ಐತಿಹಾಸಿಕ ಸುಧಾರಣೆ, ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಪ್ರತಿಪಾದಿಸಿದೆ.





























 
 

ಸುಪ್ರೀಂ ಕೋರ್ಟಿಗೆ ನಾಲ್ಕು ಅರ್ಜಿ

ಈ ಕಾಯಿದೆಯ ನಿಬಂಧನೆಗಳ ಅನುಷ್ಠಾನ ನಿಷೇಧಿಸುವಂತೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ಇನ್ನೂ ಎರಡು ಅರ್ಜಿಗಳನ್ನು ಸಲ್ಲಿಸಲಾಯಿತು. ಒಂದು ಅರ್ಜಿಯನ್ನು ದೆಹಲಿಯ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಸಲ್ಲಿಸಿದ್ದಾರೆ. ಇವರ ಮೇಲೆ ವಕ್ಫ್‌ ಹಗರಣ ಮತ್ತು ಹಣ ದುರುಪಯೋಗದ ಆರೋಪ ಇದೆ. ಇನ್ನೊಂದು ಅರ್ಜಿಯನ್ನು ಅಸೋಸಿಯೇಷನ್ ​​ಫಾರ್ ದಿ ಪ್ರೊಟೆಕ್ಷನ್ ಇನ್ ದಿ ಮ್ಯಾಟರ್ಸ್ ಆಫ್ ಸಿವಿಲ್ ರೈಟ್ಸ್ ಎಂಬ ಸಂಘಟನೆ ಸಲ್ಲಿಸಿದೆ.

ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.
ಹೊಸ ಕಾನೂನಿನಡಿಯಲ್ಲಿ ಲಿಖಿತ ದಾಖಲೆ ಇಲ್ಲದೆ ಯಾವುದೇ ವಕ್ಫ್​ ಆಸ್ತಿಯನ್ನು ನೊಂದಾಯಿಸಲಾಗುವುದಿಲ್ಲ, ಅಲ್ಲದೆ ಸರ್ಕಾರಿ ಭೂಮಿಯನ್ನು ವಕ್ಫ್​ ಆಸ್ತಿ ಎಂದು ಹೇಳಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಯಾವುದೇ ಭೂಮಿ ವಿವಾದಿತ ಅಥವಾ ಸರ್ಕಾರಿ ಭೂಮಿ ಎಂದು ಕಂಡುಬಂದರೆ ಅದನ್ನು ವಕ್ಫ್​ನಲ್ಲಿ ನೋಂದಾಯಿಸಿಕೊಳ್ಳಲಾಗುವುದಿಲ್ಲ. ಇದಕ್ಕಾಗಿ ಜಿಲ್ಲಾಧಿಕಾರಿಗೆ ತನಿಖೆ ನಡೆಸುವ ಹಕ್ಕನ್ನು ನೀಡಲಾಗಿದೆ. ವಕ್ಫ್​ ಆಸ್ತಿಗಳ ಸಂಪೂರ್ಣ ವಿವರಗಳನ್ನು ಆನ್​ಲೈನ್ ಪೋರ್ಟಲ್​ನಲ್ಲಿ ನೋಂದಾಯಿಸುವುದು ಈಗ ಕಡ್ಡಾಯವಾಗಿದ್ದು, ಇದನ್ನು 6 ತಿಂಗಳೊಳಗೆ ಜಾರಿಗೆ ತರಲಾಗುತ್ತದೆ.

ಬೊಹ್ರಾ ಮತ್ತು ಅಘಾಖಾನಿ ಸಮುದಾಯಗಳಿಗೆ ಪ್ರತ್ಯೇಕ ವಕ್ಫ್​ ಮಂಡಳಿಗಳನ್ನು ರಚಿಸಲು ಕಾನೂನು ಅವಕಾಶ ನೀಡುತ್ತದೆ. ಅಲ್ಲದೆ, ವಕ್ಫ್​ ಮಂಡಳಿಯಲ್ಲಿ ಇಬ್ಬರು ಮುಸ್ಲಿಮೇತರ ಸದಸ್ಯರು ಮತ್ತು ಮಹಿಳೆಯರ ನೇಮಕಾತಿಯನ್ನು ಖಚಿತಪಡಿಸಲಾಗಿದೆ. ವಕ್ಫ್​ ಆಸ್ತಿಗಳ ಸಮೀಕ್ಷೆಯ ಜವಾಬ್ದಾರಿಯನ್ನು ಈಗ ಸರ್ವೇ ಆಯುಕ್ತರ ಬದಲಿಗೆ ಜಿಲ್ಲಾಧಿಕಾರಿಗೆ ನೀಡಲಾಗಿದೆ.

ಈ ಬದಲಾವಣೆಯು ವಕ್ಫ್​ ಆಸ್ತಿಗಳಿಗೆ ಸಂಬಂಧಿಸಿದಂತೆ ಪಾರದರ್ಶಕತೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಆದರೆ ವಿರೋಧ ಪಕ್ಷಗಳು ಇದನ್ನು ಧಾರ್ಮಿಕ ವಿಷಯದಲ್ಲಿ ಹಸ್ತಕ್ಷೇಪ ಎಂದು ಕರೆಯುತ್ತಿವೆ. ಈ ಕಾನೂನು ರಾಷ್ಟ್ರೀಯ ಹಿತಾಸಕ್ತಿಯಿಂದ ಕೂಡಿದ್ದು, ವಕ್ಫ್​ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ಸರ್ಕಾರ ಹೇಳುತ್ತಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top