ಖಾಸಗಿ ಕಂಪನಿ ನೀಡಿದ ಶಿಕ್ಷೆಯ ವೀಡಿಯೊ ವೈರಲ್
ಕೊಚ್ಚಿ: ಟಾರ್ಗೆಟ್ ರೀಚ್ ಮಾಡಲು ಸಾಧ್ಯವಾಗದ ಉದ್ಯೋಗಿಗಳನ್ನು ಕತ್ತಿಗೆ ಸರಪಳಿ ಬಿಗಿದು ನಾಯಿಯಂತೆ ನಡೆಸಿಕೊಂಡು ಹೋದ ಘಟನೆಯೊಂದು ಕೇರಳದಲ್ಲಿ ಸಂಭವಿಸಿದ್ದು, ಕೃತ್ಯದ ವೀಡಿಯೊ ಭಾರಿ ವೈರಲ್ ಆಗಿ ಆಕ್ರೋಶಕ್ಕೆ ಗುರಿಯಾಗಿದೆ.
ಕೊಚ್ಚಿಯಲ್ಲಿರುವ ಮಾರ್ಕೆಟಿಂಗ್ ಕಂಪನಿಯೊಂದು ತನ್ನ ನೌಕರರಿಗೆ ಈ ಶಿಕ್ಷೆ ನೀಡಿದೆ ಎನ್ನಲಾಗಿದೆ. ಕಂಪನಿಯ ಮಾಜಿ ಮ್ಯಾನೇಜರ್ ಈ ವೀಡಿಯೊವನ್ನು ಬಹಿರಂಗಪಡಿಸಿದ ಬಳಿಕ ಸರಕಾರದ ಗಮನಕ್ಕೂ ಬಂದಿದೆ. ಟಾರ್ಗೆಟ್ ರೀಚ್ ಮಾಡಲಾಗದ ನೌಕರರಿಗೆ ಈ ಕಂಪನಿಯ ಮಾಲೀಕ ಈ ರೀತಿಯ ಕ್ರೂರ ಶಿಕ್ಷೆ ವಿಧಿಸುವುದು ಮಾಮೂಲಿ ಎಂದು ಮಾಜಿ ಮ್ಯಾನೇಜರ್ ಹೇಳಿಕೊಂಡಿದ್ದಾರೆ.
ಉದ್ಯೋಗಿಯೊಬ್ಬನ ಕತ್ತಿಗೆ ಸರಪಳಿ ಬಿಗಿದು ಅವನನ್ನು ನಾಯಿಯಂತೆ ಎಳೆದುಕೊಂಡು ಹೋಗುವ ದೃಶ್ಯ ವೀಡಿಯೊದಲ್ಲಿದೆ. ಇದು ಮಾರ್ಕೆಟಿಂಗ್ ಕಂಪನಿಯ ತರಬೇತಿಯ ವೀಡಿಯೊ ಎಂದು ಕೆಲವು ಉದ್ಯೋಗಿಗಳು ಹೇಳಿದ್ದರೂ ಇಂಥ ಅಮಾನವೀಯ ತರಬೇತಿ ಸರಿಯಲ್ಲ ಎಂದು ಪೊಲೀಸರು ಹೇಳಿದ್ದಾರೆ.
ನಾಲ್ಕು ತಿಂಗಳ ಹಿಂದೆ ನಡೆದ ಘಟನೆಯ ವೀಡಿಯೊವನ್ನು ಈಗ ಬಹಿರಂಗಪಡಿಸಲಾಗಿದೆ. ಕಂಪನಿಯ ಮಾಲೀಕನ ಮೇಲೆ ಸಿಟ್ಟು ಹೊಂದಿದ್ದ ಮ್ಯಾನೇಜರ್ ಆಗ ವೀಡಿಯೊ ಶೂಟ್ ಮಾಡಿ ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ. ಕಾರ್ಮಿಕ ಇಲಾಖೆ ಈ ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಪೊಲೀಸರಿಗೆ ಆದೇಶಿಸಿದೆ.
ಟಾರ್ಗೆಟ್ ರೀಚ್ ಮಾಡಲು ಸಾಧ್ಯವಾಗದ ನೌಕರರಿಗೆ ಕಂಪನಿ ಈ ರೀತಿಯ ಕ್ರೂರ ಶಿಕ್ಷೆ ವಿಧಿಸುತ್ತಿರುವುದು ಹಲವು ವರ್ಷಗಳಿಂದ ನಡೆಯುತ್ತಿದೆ ಎಂದು ಕೆಲವು ನೌಕರರು ಸುದ್ದಿ ವಾಹಿನಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.