ಗುರು ಎಂದು ಭಾವಿಸಿದಾತನೇ ಎಸಗಿದ ಘೋರ ಕೃತ್ಯ
ಅಹಮದಾಬಾದ್: ಎಂಟು ವರ್ಷದ ಹಿಂದೆ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈನ ದಿಗಂಬರ ಪಂಥದ ಸನ್ಯಾಸಿ ಶಾಂತಿಸಾಗರ್ ಮಹಾರಾಜ್ ಎಂಬಾತನಿಗೆ ಸೂರತ್‌ನ ಸೆಶನ್ಸ್ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ 25,000 ರೂ. ದಂಡ ವಿಧಿಸಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಎ.ಕೆ. ಶಾ ಅವರು ಅತ್ಯಾಚಾರ ಎಸಗಿದ ಆರೋಪದ ಮೇಲೆ 56 ವರ್ಷದ ದಿಗಂಬರ ಜೈನಮುನಿ ತಪ್ಪಿತಸ್ಥರೆಂದು ತೀರ್ಪು ನೀಡಿದ ನಂತರ ಶಿಕ್ಷೆಯನ್ನು ಪ್ರಕಟಿಸಿದರು. ಅತ್ಯಾಚಾರಕ್ಕೊಳಗಾದ ಯುವತಿ ಮತ್ತು ಇತರ ಪ್ರಾಸಿಕ್ಯೂಷನ್ ಹಾಜರುಪಡಿಸಿದ ಸಾಕ್ಷಿಗಳನ್ನು, ವೈದ್ಯಕೀಯ ವರದಿಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಗಣಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ.
ಈ ಘಟನೆ ಅಕ್ಟೋಬರ್ 2017ರಲ್ಲಿ ಸೂರತ್‌ನ ಜೈನ ಧರ್ಮಶಾಲೆಯಲ್ಲಿ ನಡೆದಿತ್ತು. ಕುಟುಂಬದೊಂದಿಗೆ ವಡೋದರಾದಲ್ಲಿ ವಾಸಿಸುತ್ತಿದ್ದ ಯುವತಿ ಈ ಜೈನಮುನಿಯನ್ನು ಗುರು ಎಂದು ಪರಿಗಣಿಸಿದ್ದಳು. ಆಕೆಯ ಕುಟುಂಬದವರು ಕೂಡ ಮುನಿಯ ಮೇಲೆ ಬಹಳ ಗೌರವ, ನಂಬಿಕೆ ಹೊಂದಿದ್ದರು. ತನ್ನ ತಂದೆ ಮತ್ತು ಸಹೋದರನೊಂದಿಗೆ ಸೂರತ್‌ಗೆ ಪ್ರಯಾಣ ಬೆಳೆಸಿದಾಗ ಶಾಂತಿಸಾಗರ್ ಮಹಾರಾಜ್ ಆ ಯುವತಿಯ ಮೊಬೈಲ್ ಸಂಖ್ಯೆಯನ್ನು ಆಕೆಯ ತಂದೆಯಿಂದ ಪಡೆದುಕೊಂಡಿದ್ದ. ಈ ಘಟನೆಗೆ ಮೊದಲು ಆಕೆಯನ್ನು ಸಂಪರ್ಕಿಸಿದ್ದ ಎನ್ನಲಾಗಿದೆ.
ಅತ್ಯಾಚಾರ ನಡೆದ ದಿನದಂದು, ಆ ಜೈನಮುನಿ ಯುವತಿಯ ತಂದೆ ಮತ್ತು ಸಹೋದರನನ್ನು ವಿಧಿವಿಧಾನಗಳನ್ನು ನಡೆಸುವ ನೆಪದಲ್ಲಿ ಬೇರೆ ಬೇರೆ ಕೋಣೆಗಳಲ್ಲಿ ಇರಿಸಿದ್ದ. ಅವರಿಗೆ ಹೊರಗೆ ಬಾರದಂತೆ ಸೂಚಿಸಿದ್ದ. ನಂತರ ಪ್ರತ್ಯೇಕ ಕೋಣೆಯಲ್ಲಿ ಆ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ. ಆಕೆ ವಿರೋಧಿಸಿದರೆ ಆಕೆಯ ಕುಟುಂಬ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಕೂಡ ಹಾಕಿದ್ದ.
ಧಾರ್ಮಿಕ ವಿಧಿವಿಧಾನಗಳನ್ನು ಮಾಡುವ ನೆಪದಲ್ಲಿ ಶಾಂತಿಸಾಗರ್ ಮಹಾರಾಜ್ ನಗ್ನ ಛಾಯಾಚಿತ್ರಗಳನ್ನು ಕೇಳಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸಾಮಾಜಿಕ ಕಳಂಕದ ಭಯದಿಂದಾಗಿ ಆಕೆಯ ಕುಟುಂಬ ಆರಂಭದಲ್ಲಿ ಈ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಲು ಹಿಂಜರಿಯಿತು. ಆದರೆ ಅತ್ಯಾಚಾರ ನಡೆದ 13 ದಿನಗಳ ನಂತರ ಇತರ ಯುವತಿಯರಿಗೆ ಇದೇ ರೀತಿಯ ಘಟನೆಗಳು ಸಂಭವಿಸದಂತೆ ತಡೆಯುವ ಉದ್ದೇಶದಿಂದ ಅವರು ಸೂರತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಶಾಂತಿಸಾಗರ್ ಮಹಾರಾಜ್‌ನನ್ನು ಅಕ್ಟೋಬರ್ 2017ರಲ್ಲಿ ಬಂಧಿಸಲಾಯಿತು. ಅಂದಿನಿಂದ ಸೂರತ್‌ನ ಲಾಜ್‌ಪೋರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆರೋಪಿ ಈಗಾಗಲೇ ಜೈಲಿನಲ್ಲಿರುವುರುವುದರಿಂದ ಇನ್ನುಳಿದ ಸುಮಾರು ಎರಡೂವರೆ ವರ್ಷದ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.