ಗೂಡ್ಸ್ ವಾಹನಗಳು, ಟ್ಯಾಕ್ಸಿ ಸೇರಿ 6 ಲಕ್ಷಕ್ಕೂ ವಾಹನಗಳ ಸಂಚಾರ ಸ್ಥಗಿತ
ಬೆಂಗಳೂರು: ರಾಜ್ಯದಲ್ಲಿ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಏ.14ರಿಂದ ಮುಷ್ಕರ ಹೂಡಲು ಲಾರಿ ಮಾಲೀಕರು ತೀರ್ಮಾನಿಸಿದ್ದಾರೆ. ಅಗತ್ಯ ವಸ್ತುಗಳ ದರ ಏರಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಮತ್ತು ಟೋಲ್ ದರ ಹೆಚ್ಚಿಸಿದ್ದು ಇದು ಲಾರಿ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ಡೀಸೆಲ್ ದರ ಏರಿಕೆ ಖಂಡಿಸಿ ಏಪ್ರಿಲ್ 14ರ ಮಧ್ಯರಾತ್ರಿಯಿಂದ ಲಾರಿ ಮಾಲೀಕರ ಸಂಘ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 2 ರೂಪಾಯಿ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಇದು ಲಾರಿ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಮುಷ್ಕರಕ್ಕೆ ಕರೆ ನೀಡಿದ್ದು, ರಾಜ್ಯಾದ್ಯಂತ ಎಲ್ಲಾ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದ್ದು, ಗೂಡ್ಸ್ ವಾಹನಗಳು, ಏರ್‌ಪೋರ್ಟ್ ಟ್ಯಾಕ್ಸಿಗಳೂ ಸಹ ಸಂಪೂರ್ಣ ಬಂದ್ ಆಗಲಿವೆ. ಸುಮಾರು 6 ಲಕ್ಷ ಲಾರಿಗಳು ಗೂಡ್ಸ್ ವಾಹನಗಳ ಸಂಚಾರ ಸ್ಥಗಿತಗೊಳ್ಳಲಿದೆ.
ಏರ್ ಪೋರ್ಟ್ ಟ್ಯಾಕ್ಸಿ, ಗೂಡ್ಸ್ ವಾಹನಗಳು, ಪೆಟ್ರೋಲ್ ಡಿಸೇಲ್, ಜಲ್ಲಿಕಲ್ಲು, ಮರಳು ಲಾರಿಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ. ಚಾಲಕರ ಸಂಘವೂ ಬಂದ್ ಬೆಂಬಲಿಸಿದೆ.
ಈ ಕುರಿತು ಮಾತನಾಡಿರುವ ಲಾರಿ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಗಪ್ಪ, ಡಿಸೇಲ್ ಬೆಲೆ 7 ತಿಂಗಳಲ್ಲಿ 5 ರೂ. ಏರಿಕೆಯಾಗಿದೆ. ಏನಾದರೂ ಫ್ರೀ ಕೊಡಲಿ, ಆದರೆ ಹೊಟ್ಟೆ ಮೇಲೆ ಹೊಡೆದು ದರ ಏರಿಕೆ ಮಾಡೋದು ಸರಿಯಲ್ಲ. ಫಿಟ್ನೆಸ್ ಫೀಸ್, ಬಾರ್ಡರ್ ಚೆಕ್‌ಪೋಸ್ಟ್, ಡೀಸೆಲ್ ದರ ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಮುಷ್ಕರಕ್ಕೆ ಪೆಟ್ರೋಲ್ ಬಂಕ್ ಮಾಲೀಕರು ಬೆಂಬಲ ಕೊಟ್ಟಿದ್ದಾರೆ. ಏರ್‌ಪೋರ್ಡ್ ಟ್ಯಾಕ್ಸಿ, ಜಲ್ಲಿ ಮರಳು, ಸೇರಿದಂತೆ ಗೂಡ್ಸ್ ವಾಹನಗಳು ಬಂದ್ ಆಗಲಿವೆ. ಎಲ್ಲ ಬಗೆಯ ವಾಣಿಜ್ಯ ವಾಹನಗಳು ಸ್ಥಗಿತವಾಗಲಿವೆ ಎಂದು ಹೇಳಿದ್ದಾರೆ.