ಎ.19ರಂದು ರಿಜಿಸ್ಟ್ರರ್ ಮದುವೆ ಮಾಡಿಕೊಳ್ಳುವುದಾಗಿ ಹೇಳಿಕೆ
ಉಡುಪಿ: ಉಡುಪಿಯಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಲವ್ ಜಿಹಾದ್ ಪ್ರಕರಣ ಯುವತಿ ನ್ಯಾಯಾಲಯಕ್ಕೆ ಹಾಜರಾಗುವುದರೊಂದಿಗೆ ತಿರುವು ಪಡೆದುಕೊಂಡಿದೆ. ಕ್ರೈಸ್ತ ಸಮುದಾಯದ 19ರ ಹರೆಯದ ಕಾಲೇಜು ವಿದ್ಯಾರ್ಥಿನಿಯನ್ನು ಮುಹಮ್ಮದ್ ಅಕ್ರಮ್ ಎಂಬಾತ ಅಪಹರಿಸಿ ಬಲವಂತವಾಗಿ ಮದುವೆಯಾಗಲು ತಯಾರಿ ನಡೆಸಿದ್ದಾನೆ. ಈ ವಿಚಾರದಲ್ಲಿ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಯುವತಿಯ ತಾಯಿ ಕೆಲದಿನಗಳ ಹಿಂದೆ ಆರೋಪಿಸಿದ್ದರು. ಇದರ ಬೆನ್ನಿಗೆ ಹಿಂದು ಸಂಘಟನೆಗಳು ಮಧ್ಯೆ ಪ್ರವೇಶಿಸಿ ಲವ್ ಜಿಹಾದ್ ಅರೋಪ ಮಾಡಿದ್ದವು.
ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಹೇಬಿಯಸ್ ಕಾರ್ಪಸ್ ಅರ್ಜಿಯ ಹಿನ್ನೆಲೆಯಲ್ಲಿ ನಿನ್ನೆ ಹೈಕೋರ್ಟಿಗೆ ಅಕ್ರಮ್ ಜೊತೆ ಹಾಜರಾದ ಅಪಹೃತ ಯುವತಿ ಉಡುಪಿಯ ಕೊಡವೂರು ಗ್ರಾಮದ ಉದ್ದಿನಹಿತ್ಲು ಗೋಡ್ವಿನ್ ದೇವದಾಸ್ ಎಂಬವರ ಮಗಳು ಜಿನ ಮೆರಿಲ್ ತಾನು ಸ್ವಇಚ್ಚೆಯಿಂದ ಅಕ್ರಮ್ ಜೊತೆ ಹೋಗಿರುವುದಾಗಿ ಹೇಳಿಕೆ ನೀಡಿದ್ದಾಳೆ.
ತನ್ನ ಮಗಳು ಜಿನ ಮೆರಿಲ್‌ಳನ್ನು ಮುಹಮ್ಮದ್ ಅಕ್ರಮ್ ಅಪರಹರಿಸಿರುವುದಾಗಿ ಗೋಡ್ವಿನ್ ದೇವದಾಸ್ ನೀಡಿದ ದೂರಿಗೆ ಸಂಬಂಧಿಸಿದಂತೆ ಮಾ.20ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಾ.28ರಂದು ಯುವತಿಯ ಪೋಷಕರು ಹೈಕೋರ್ಟ್‌ನಲ್ಲಿ ತಮ್ಮ ಮಗಳ ಕುರಿತು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಹಾಜರಿದ್ದ ಅಕ್ರಮ್ ಹಾಗೂ ಜಿನ ಪರ ವಕೀಲರು, ಜಿನ ಮೆರಿಲ್‌ಳನ್ನು ಎ.4ರಂದು ಹೈಕೋರ್ಟ್ ಮುಂದೆ ಹಾಜರುಪಡಿಸುವುದಾಗಿ ತಿಳಿಸಿದ್ದರು. ಅದರಂತೆ ಹೈಕೋರ್ಟ್‌ನ ನ್ಯಾಯಮೂರ್ತಿ ವಿ.ಕಾಮೇಶ್ವರ್ ರಾವ್ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರ ದ್ವಿಸದಸ್ಯ ಪೀಠದ ಮುಂದೆ ಜಿನ ಮೆರಿಲ್ ಹಾಗೂ ಮುಹಮ್ಮದ್ ಅಕ್ರಮ್ ನಿನ್ನೆ ತಮ್ಮ ವಕೀಲರ ಮೂಲಕ ಹಾಜರಾದರು. ನ್ಯಾಯಾಲಯದ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳ ಮುಂದೆ ತನ್ನನ್ನು ಯಾರೂ ಕೂಡ ಅಪಹರಿಸಿರುವುದಿಲ್ಲ, ನಾನು ಸ್ವಇಚ್ಛೆಯಿಂದ ಅಕ್ರಮ್ ಜೊತೆ ತೆರಳಿರುವುದಾಗಿ ಯುವತಿ ತಿಳಿಸಿದ್ದಾಳೆ.
ಯುವತಿಯ ತಾಯಿ ಮಗಳ ಜೊತೆ ಮಾತನಾಡಬೇಕು ಎಂದು ತಿಳಿಸಿದಾಗ, ನ್ಯಾಯಮೂರ್ತಿ ಸ್ವತಹ ತಮ್ಮ ಕೊಠಡಿಯಲ್ಲಿ ಆಕೆಯ ಜೊತೆ ತಾಯಿಯನ್ನು ಮಾತನಾಡಿಸಿದ್ದಾರೆ. ನಂತರ ವಿಚಾರಣೆಯಲ್ಲಿ ತಾಯಿ, ಮಗಳನ್ನು ತನ್ನ ಜೊತೆ ಕಳಿಸುವಂತೆ ನ್ಯಾಯಮೂರ್ತಿ ಅವರಲ್ಲಿ ಕೇಳಿಕೊಂಡರು. ಆದರೆ ಇದಕ್ಕೆ ಯುವತಿ ಒಪ್ಪಲಿಲ್ಲ. ತಾನು ಅಕ್ರಮ್ ಜೊತೆ ಎ.19ರಂದು ರಿಜಿಸ್ಟ್ರರ್ ಮದುವೆ ಮಾಡಿಕೊಳ್ಳುತ್ತಿದ್ದು, ಮದುವೆ ನಂತರ ತಾಯಿಯನ್ನು ಭೇಟಿಯಾಗುವುದಾಗಿ ಆಕೆ ಪೀಠದ ಮುಂದೆ ತಿಳಿಸಿದ್ದಾಳೆ. ತಾಯಿಯೊಂದಿಗೆ ಕೂಡ ಉತ್ತಮ ಬಾಂಧವ್ಯದೊಂದಿಗೆ ಇರುವುದಾಗಿ ಆಕೆ ನ್ಯಾಯಮೂರ್ತಿಗಳ ಮುಂದೆ ತಿಳಿಸಿದ್ದಾಳೆ. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಎ.22ರಂದು ನಿಗದಿಪಡಿಸಿದ್ದು, ಅಂದು ಯುವತಿಯನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ಪೀಠ ನಿರ್ದೇಶಿಸಿದೆ. ಈ ಸಂದರ್ಭದಲ್ಲಿ ಉಡುಪಿ ನಗರ ಠಾಣಾ ಎಸ್‌ಐ ಪುನೀತ್ ಹಾಜರಿದ್ದರು.