ಪುತ್ತೂರು: ಶಾಲಾ ಶಿಕ್ಷಣ ಇಲಾಖೆಯ ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯವರ ನೂತನ ಕಛೇರಿಯ ಉದ್ಘಾಟನೆ ಏಪ್ರಿಲ್ 5ರಂದು ನೂತನ ಕಚೇರಿ ಆವರಣದಲ್ಲಿ ನಡೆಯಿತು.
ಆರಂಭದಲ್ಲಿ ಶಾಸಕರಾದ ಅಶೋಕ್ ರೈ ಅವರು ರಿಬ್ಬನ್ ಕತ್ತರಿಸಿ ಕಛೇರಿಯೊಳಗಡೆ ದೀಪ ಪ್ರಜ್ವಲಿಸಿ ಕಚೇರಿಯನ್ನು ಉದ್ಘಾಟಿಸಿದರು. ಶಿಕ್ಷಕರು ನಮ್ಮ ಜಿಲ್ಲೆಯ ಮಕ್ಕಳನ್ನು ಪ್ರತಿಭಾವಂತರನ್ನಾಗಿ ರೂಪಿಸಿ ಹೆಚ್ಚು ಸರ್ಕಾರಿ ಉದ್ಯೋಗ ಸಿಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿ ಶಿಕ್ಷಣ ಇಲಾಖೆಯಿಂದ ಸಿಗುವ ಎಲ್ಲಾ ಅನುದಾನಗಳನ್ನು ತರಿಸಿಕೊಡುತ್ತೇನೆ ಎಂದು ವಾಗ್ದಾನ ನೀಡಿದರು. ಬಳಿಕ ಕಳೆದ ಸಾಲಿನಲ್ಲಿ 10ನೇ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಲ್ಯಾಪ್ ಟಾಪ್ ನೀಡಿ ಗೌರವಿಸಿದರು.

ಕಟ್ಟಡದ ಹಿನ್ನೆಲೆ :
87 ವರ್ಷಗಳ ಹಿಂದೆ ಸ್ವಾತಂತ್ರ್ಯ ಪೂರ್ವದ 1938ರಲ್ಲಿ ನಿರ್ಮಾಣಗೊಂಡಿದ್ದ ಕಟ್ಟಡವನ್ನು ತೆರವುಗೊಳಿಸಿ 2024ರ ಮಾರ್ಚ್ 5ರಂದು ಶಿಲಾನ್ಯಾಸ ನಡೆದಿತ್ತು. 13 ತಿಂಗಳ ಬಳಿಕ ಸುಸಜ್ಜಿತ ಕಟ್ಟಡ ಪೂರ್ವಗೊಂಡು ಇಂದು ಲೋಕಾರ್ಪಣೆ ಗೊಂಡಿತು.

ಅತಿಥಿಗಳ ಮಾತುಗಳು
ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಅವರು ಮಾತನಾಡಿ, ಸರಕಾರಿ ಶಾಲೆಗಳನ್ನು ಬೆಂಬಲಿಸುವ ಮೂಲಕ ನಾವು ಸಮಾನತೆ ತರಬಹುದು ಎಂದು ಹೇಳಿ ಅವರ ಇಬ್ಬರೂ ಮಕ್ಕಳನ್ನು ಸರಕಾರಿ ಶಾಲೆಯಲ್ಲಿ ಓದಿಸಿದ್ದನ್ನು ಹೆಮ್ಮೆಯಿಂದ ಹೇಳಿಕೊಂಡರು.
ನಿವೃತ್ತ ಜಂಟಿ ನಿರ್ದೇಶಕ ಮತ್ತು ಪುತ್ತೂರಿನ ಮಾಜಿ ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಶಿವರಾಮಯ್ಯ ಅವರು ಈ ನೂತನ ಕಟ್ಟಡಕ್ಕೆ ರೂ. 80 ಲಕ್ಷಗಳ ಅನುದಾನ ಇಡಿಸಲು ಹೆಣಗಾಡಿದ್ದನ್ನು ಸ್ಮರಿಸಿಕೊಂಡರು. ಮಾಜಿ ಮುಖ್ಯಮಂತ್ರಿ ಡಿ .ವಿ. ಸದಾನಂದ ಗೌಡರ ಅವಧಿಯಲ್ಲಿ ಮಹಾಲಿಂಗೇಶ್ವರ ದೇವಳಕ್ಕೆ ನಿವೃತ್ತ ಶಿಕ್ಷಕ ಕುಂಜತ್ತಾಯರ ಮನವೊಲಿಸಿ ಅವರ 41 ಸೆಂಟ್ಸ್ ಜಾಗವನ್ನು ದೇವಳಕ್ಕೆ ಪಡೆದುಕೊಂಡದ್ದನ್ನು ಭಕ್ತಿಯಿಂದ ನೆನಪಿಸಿಕೊಂಡರು.
ತಹಶೀಲ್ದಾರ್ ಪುರಂದರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪ್ರಾಥಮಿಕ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ರಾಮನಗರ ತಾಲೂಕಿನ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಮುಂತಾದವರು ಶುಭ ಹಾರೈಸಿದರು.
ಸನ್ಮಾನ:
ಸನ್ಮಾನ – ಶಾಸಕರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ವೈ. ಶಿವರಾಮಯ್ಯ, ಕಟ್ಟಡದ ಗುತ್ತಿಗೆದಾರ ಕುಂಞಿಕೋಟಿ ಮತ್ತು ಜಿ.ಪಂ. ಇಂಜಿನಿಯರ್ ಸಂದೀಪ್ ಅವರಿಗೆ ಇಲಾಖಾ ಸನ್ಮಾನ ನೀಡಲಾಯಿತು.
ನಿವೃತ್ತ ಶಿಕ್ಷಕ ಎಚ್. ಬಿ. ಶ್ರೀನಿವಾಸ್ ಅವರು ಗಡಿಯಾರವೊಂದನ್ನು ಕಚೇರಿಗೆ ಉಡುಗೊರೆಯಾಗಿ ನೀಡಿದರು.
ಡಾ. ಸುಚಿತ್ರಾ ಹೊಳ್ಳ ಮತ್ತು ಪವಿತ್ರಾ ರೂಪೇಶ್ ಬಳಗದವರಿಂದ ‘ ತಾಯಿ ಶಾರದೆ….’ ಪ್ರಾರ್ಥನಾ ಗೀತೆ ಮತ್ತು ನಾಡಗೀತೆಗಳ ಗಾಯನ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಸ್ವಾಗತಿಸಿ ದ.ಕ. ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ವಂದಿಸಿದರು. ಶಿಕ್ಷಕ ಗಣೇಶ್ ನಡುವಾಲ್ ಕಾರ್ಯಕ್ರಮ ನಿರೂಪಿಸಿದರು. ವಿಮಲ್ ಕುಮಾರ್, ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ಪುತ್ತೂರು ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ವಸಂತ ಮೂಲ್ಯ, ಜಿಲ್ಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಿಂಗರಾಜು, ಕಡಬ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಶಾಂತಾರಾಮ ಓಡ್ಲ, ನಾಗೇಶ್ ಪಾಟಾಳಿ, ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಕರುಣಾಕರ, ಬಾಲಕೃಷ್ಣ, ಇಲಾಖಾ ಲೆಕ್ಕ ಪರಿಶೋಧಕ ಸಂದೀಪ್, ಶ್ಯಾಮಲಾ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಯೋಜಕ ನವೀನ್ ಸ್ಟೀಫನ್ ವೇಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.