ಮಂಗಳೂರು: ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುವ ನಂಬಿಕೆ ಹುಟ್ಟಿಸಿ ಸುಮಾರು 70 ಲ.ರೂ. ವಂಚಿಸಿದ ಕುರಿತು ಮಂಗಳೂರಿನ ವ್ಯಕ್ತಿಯೊಬ್ಬರು ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.
ಫೇಸ್‌ಬುಕ್‌ನಲ್ಲಿ ಪರಿಚಿತನಾದ ರೈಸೆನ್ ಎಂಬ ವ್ಯಕ್ತಿ ದೂರುದಾರರ ವಿಶ್ವಾಸ ಸಂಪಾದಿಸಿ ಕ್ರಿಪ್ಟೊ ಕರೆನ್ಸಿ ಹೂಡಿಕೆಯ ಆಶೆ ಹುಟ್ಟಿಸಿದ್ದಾನೆ. ತಾನು ಕ್ರಿಪ್ಟೊ ಕರೆನ್ಸಿ ಟ್ರೇಡಿಂಗ್ ಮಾಡುತ್ತಿದ್ದು, ಅದರಲ್ಲಿ ಶೇ.30ರಷ್ಟು ಲಾಭಾಂಶವಿದೆ ಎಂದು ಹೇಳಿದ್ದ. ಅವನ ಮಾತು ನಂಬಿ ದೂರುದಾರರು ಫೆ.2ರಿಂದ 23ರ ವರೆಗೆ ಪ್ರತಿದಿನ ಹೂಡಿಕೆ ಮಾಡುತ್ತಿದ್ದರು.
ಒಟ್ಟಾರೆಯಾಗಿ 69,92,726 ರೂ. ಹೂಡಿಕೆಯಾದ ಬಳಿಕ ಹಣ ಹಿಂಪಡೆಯಲು ಯತ್ನಿಸಿದಾಗ ರೈಸೆನ್ ಏನೇನೋ ಸಬೂಬುಗಳನ್ನು ಹೇಳಿ ತಪ್ಪಿಸಿಕೊಳ್ಳತೊಡಗಿದ. ದೂರುದಾರರು ಸ್ನೇಹಿತರ ಜೊತೆ ಈ ವಿಚಾರ ತಿಳಿಸಿದಾಗ ಮೋಸ ಹೋಗಿರುವುದು ತಿಳಿದಿದೆ. ಬಳಿಕ ಅವರು ರೈಸೆನ್ ವಿರುದ್ಧ ದೂರು ನೀಡಿದ್ದಾರೆ.