ಪುತ್ತೂರು: ಧೀಮಂತ ನಾಯಕ, ರಾಜಕೀಯ, ಸಾಮಾಜಿಕವಾಗಿ ಎಲ್ಲಾ ಅರ್ಹತೆಗಳನ್ನು ಹೊಂದಿ ಬದುಕಿದ ಬಾಬು ಜಗಜ್ಜೀವನ್ ರಾಮ್ ಅವರು ಒಂದರ್ಥದಲ್ಲಿ ಸಮಾಜ ಶಕ್ತಿಯಾಗಿದ್ದರು ಎಂದು ಪುತ್ತೂರು ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಿನ್ಸಿಪಾಲ್ ಸುಬ್ಬಪ್ಪ ಕೈಕಂಬ ಹೇಳಿದರು.
ಅವರು ಶನಿವಾರ ಪುತ್ತೂರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಅವರ 118ನೇ ಜನ್ಮ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.
ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸುವ ಮೂಲಕ ಸಮಾಜದ ಬದಲಾವಣೆಯ ಮಾಡುವ ಜತೆಗೆ ಎಲ್ಲಾ ವರ್ಗದವರು ಉದ್ಧಾರವಾಗಬೇಕು ಎಂಬ ಚಿಂತನೆಯನ್ನು ಹೊಂದಿದ್ದರು. ಪ್ರಸ್ತುತ ಅವರ ಕಾರ್ಯವೈಖರಿ, ಆದರ್ಶ, ಜೀವನ ಕ್ರಮವನ್ನು ನಾವು ಅರ್ಥೈಸಿಕೊಂಡರೆ ಸಮಾಜದಲ್ಲಿನ ಅಂಧಕಾರವನ್ನು ಹೋಗಲಾಡಿಬಹುದು ಎಂದು ಹೇಳಿದ ಅವರು, ಅವರ ಆದರ್ಶಗಳು ನಮಗೆ ದೀಪಸ್ತಂಭವಾಗಬೇಕು ಎಂದರು.
ಪುತ್ತೂರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಸೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ, ವಿವಿಧ ಇಲಾಖೆಗಳ ಸಚಿವರಾಗಿ , ಉಪಪ್ರಧಾನಿಯಾಗಿ, ಹಸಿರುಕ್ರಾಂತಿಯ ಹರಿಕಾರತರಾಗಿದ್ದ ಬಾಬು ಜಗಜೀವನ್ ರಾಂ ಅವರ ಆದರ್ಶ, ವಿಚಾರಧಾರೆಗಳು ಮೇಲ್ಪಂಕ್ತಿಯಾಗಬೇಕು. ರಾಜಕೀಯ, ಸಾಮಾಜಿಕ, ಆರ್ಥಿಕವಾಗಿಯೂ ಜೀವನದುದ್ದಕ್ಕೂ ಸಾಕಷ್ಟು ತನ್ನನ್ನು ತೊಡಗಿಸಿಕೊಂಡು ಈ ಮೂಲಕ ಸಮಾಜ ಬದಲಾವಣೆಯ ಹರಿಕಾರರಾಗಿದ್ದರು ಎಂದರು.
ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ನಗರ ಠಾಣೆ ವೃತ್ತ ನಿರೀಕ್ಷಕ ಜಾನ್ಸನ್, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಮುದ್ದ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ವಿನಯ ಕುಮಾರಿ ಸ್ವಾಗತಿಸಿದರು. ಅಕ್ಷತಾ ಪೈ ಕಾರ್ಯಕ್ರಮ ನಿರೂಪಿಸಿದರು. ಪ್ರೇಮಲತಾ ವಂದಿಸಿದರು.